ದರೋಡೆ: ಮೂವರು ಆರೋಪಿಗಳ ಸೆರೆ : ಕಾರು ಸೇರಿ 8.17 ಲಕ್ಷ ಮೌಲ್ಯದ ವಸ್ತುಗಳ ವಶ
ಮೈಸೂರು

ದರೋಡೆ: ಮೂವರು ಆರೋಪಿಗಳ ಸೆರೆ : ಕಾರು ಸೇರಿ 8.17 ಲಕ್ಷ ಮೌಲ್ಯದ ವಸ್ತುಗಳ ವಶ

January 11, 2020

ಚನ್ನರಾಯಪಟ್ಟಣ, ಜ.10-ದರೋಡೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವ ಚನ್ನರಾಯಪಟ್ಟಣ ಪೊಲೀಸರು ಮಾರುತಿ ಬ್ರೀಜಾ ಕಾರು ಸೇರಿದಂತೆ 8.17 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಹೊಸರೋಡು ನಿವಾಸಿ ಸಯ್ಯದ್ ಶಬ್ಬೀರ್(23), ಕೋರಮಂಗಲದ ತೇಜಸ್ ಯಾದವ್(20) ಮತ್ತು ಗೋಪಾಲ(20) ಬಂಧಿತ ದರೋಡೆಕೋರರಾಗಿದ್ದು, ಇವರ ಜೊತೆಯಲ್ಲೇ ದರೋಡೆ ನಡೆಸಿದ್ದ ಶಿವಮೊಗ್ಗದ ಶಾನ್ ನವಾಜ್ ಮತ್ತು ಬೆಂಗಳೂರಿನ ಮಹಮದ್ ಆಶಂ ಅವರಿಗಾಗಿ ಹುಡುಕಾಟ ನಡೆದಿದೆ.

ವಿವರ: ಚನ್ನರಾಯಪಟ್ಟಣ ಹೃದಯ ಭಾಗದಲ್ಲಿ ಇರುವ ಯೋಗೇಶ್ ಪೆಟ್ರೋಲ್ ಬಂಕ್‍ಗೆ ಜ.7ರಂದು ಬೆಳಗಿನ ಜಾವ 5.20ರ ವೇಳೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಮಾರುತಿ ಬ್ರೀಜಾ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ಕಾರಿಗೆ ಪೆಟ್ರೋಲ್ ತುಂಬಿಸಿಕೊಂಡು ಬಂಕ್ ಸಿಬ್ಬಂದಿ ಸಂದೀಪ್ ಬಳಿ ಇದ್ದ 3 ಸಾವಿರ ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಅದೇ ದಿನ ಬೆಳಿಗ್ಗೆ 5.45ರ ವೇಳೆ ಹಿರೇಸಾವೆ ಸಮೀಪ ಬಿ.ಎಂ.ರಸ್ತೆಯಲ್ಲಿ ಸುಧಾಕರ್ ಎಂಬುವರು ಬೈಕಿನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿ ಲಾಂಗ್‍ನ ಹಿಂಬದಿಯಿಂದ ಸುಧಾಕರ್ ಮೇಲೆ ಹಲ್ಲೆ ನಡೆಸಿ ಆತನ ಬಳಿ ಇದ್ದ ಮೊಬೈಲ್ ಮತ್ತು ಬೈಕ್‍ನ ಕೀ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆ ಮತ್ತು ಹಿರೇಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರನ್ನು ಹಿಡಿಯಲು ಜಿಲ್ಲಾ ಎಸ್ಪಿ ರಾಂ ನಿವಾಸ್ ಸೆಪಟ್, ಎಎಸ್‍ಪಿ ಶ್ರೀಮತಿ ನಂದಿನಿ, ಹೊಳೆನರಸೀಪುರ ಡಿವೈಎಸ್‍ಪಿ ಬಿ.ಬಿ.ಲಕ್ಷ್ಮೇಗೌಡ ಮಾರ್ಗದರ್ಶನದಲ್ಲಿ ಚನ್ನರಾಯಪಟ್ಟಣ ಸರ್ಕಲ್ ಇನ್ಸ್‍ಪೆಕ್ಟರ್ ಬಿ.ಜೆ.ಕುಮಾರ್, ಚನ್ನರಾಯಪಟ್ಟಣ ನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಕಿರಣ್ ಕುಮಾರ್ ಮತ್ತು ಹಿರೀಸಾವೆ ಸಬ್ ಇನ್ಸ್‍ಪೆಕ್ಟರ್ ಶ್ರೀಮತಿ ಭವಿತಾ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಈ ತಂಡವು ಜ.9ರಂದು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ 1 ಮೊಬೈಲ್ ಫೋನ್, ಮಾರಕಾಸ್ತ್ರಗಳು, ದರೋಡೆಗೆ ಬಳಸಿದ್ದ ಮಾರುತಿ ಬ್ರೀಜಾ ಕಾರು, 2300 ರೂ. ನಗದು ಹಾಗೂ ಬೈಕ್ ಕೀ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ಜೊತೆ ಪೊಲೀಸ್ ಸಿಬ್ಬಂದಿಗಳಾದ ಎಎಸ್‍ಐ ಕುಮಾರಸ್ವಾಮಿ, ಸುರೇಶ್, ಜವರೇಗೌಡ, ಮಹೇಶ, ಜಯಪ್ರಕಾಶ್, ರವೀಶ, ಬೀರಲಿಂಗ, ನಾಗೇಂದ್ರ, ಅರುಣ, ಪುಟ್ಟರಾಜು, ಚಾಲಕರಾದ ಪರಮೇಶ ಮತ್ತು ಮಧು ಭಾಗವಹಿಸಿದ್ದರು. ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ತಂಡವನ್ನು ಜಿಲ್ಲಾ ಎಸ್ಪಿ ಶಾಘಿಸಿದ್ದಾರೆ.

Translate »