ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಶಯ
ಮೈಸೂರು,ಮಾ.12-ಚರ್ಚೆ ನೆಪದಲ್ಲಿ ಶ್ರೇಷ್ಠ ಸಂವಿಧಾನಕ್ಕೆ ಅಪಚಾರ ಮಾಡ ಬಾರದು ಎಂದು ಮಾಜಿ ಮೇಯರ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಹೇಳಿದ್ದಾರೆ. ಸದನದಲ್ಲಿ ಸಂವಿಧಾನ ಕುರಿತ ವಿಶೇಷ ಚರ್ಚೆ ವೇಳೆ ನಡೆದಿರುವ ಅಸಂಬದ್ಧ ಘಟನೆಗಳ ಬಗ್ಗೆ ಪತ್ರಿಕಾ ಪ್ರಕಟಣೆ ಯಲ್ಲಿ ವಿಷಾದ ವ್ಯಕ್ತಪಡಿಸಿರುವ ಅವರು, ಪ್ರಜಾಪ್ರಭುತ್ವ, ಸಮಾಜ ವಾದ, ಜಾತ್ಯಾತೀತತೆ ಹಾಗೂ ರಾಷ್ಟ್ರೀಯ ಸಮಗ್ರತೆಯನ್ನು ಸ್ಪಷ್ಟಪಡಿಸುವ ಸಂವಿಧಾನ ನಾವು ಪೂಜಿಸುವ ಭಗವದ್ಗೀತೆಯಷ್ಟೇ ಶ್ರೇಷ್ಠ. ಪ್ರತಿಯೊಬ್ಬ ಪ್ರಜೆಯ ಹಕ್ಕು ಹಾಗೂ ಕರ್ತವ್ಯಗಳನ್ನು ಸಂವಿಧಾನ ಖಚಿತ ಗೊಳಿಸಿದೆ. ಯಾವುದೇ ಕಾನೂನು ಸಂವಿಧಾನಕ್ಕೆ ಅನುಗುಣವಾಗಿರುತ್ತದೆ. ಆದರೆ ಸದನದಲ್ಲಿ ಸಂವಿಧಾನ ಕುರಿತ ಚರ್ಚೆ ಹಳಿ ತಪ್ಪಿದಂತಾಗಿದೆ ಎಂದು ವಿಷಾದಿಸಿದ್ದಾರೆ.
ಸದನದಲ್ಲಿರುವುದು ಲಕ್ಷಾಂತರ ಜನರನ್ನು ಪ್ರತಿನಿಧಿಸುವ ನಾಯಕರು. ಅವರೆಲ್ಲಾ ಸಂವಿಧಾನದಡಿಯಲ್ಲೇ ಆಯ್ಕೆಯಾದವರು. ಹಾಗಾಗಿ ದೇಶದ ಸಂವಿಧಾನದ ಬಗ್ಗೆ ತಿಳಿದಿರುತ್ತಾರೆ ಎಂಬುದು ಜನರ ನಂಬಿಕೆ. ಆದರೂ ಸದನದಲ್ಲಿ ಸಂವಿಧಾನ ಕುರಿತ ವಿಶೇಷ ಚರ್ಚೆ ನಡೆದಿದೆ. ಅದು ಸಮರ್ಪಕವಾಗಿದ್ದರೆ, ಸಾಮಾನ್ಯರಿಗೆ ಉಪಯೋಗವಾಗು ವಂತಿದ್ದರೆ ಪರವಾಗಿಲ್ಲ. ಆದರೆ ಚರ್ಚೆ ನೆಪದಲ್ಲಿ ರಾಜಕೀಯ ಟೀಕೆ-ಟಿಪ್ಪಣಿ, ವೈಯಕ್ತಿಕ ವಿಚಾರಗಳ ಪ್ರಸ್ತಾಪಿಸಿ ಗಲಾಟೆ ನಡೆಸುವುದು, ತಮಗೆ ಬೇಕಾದ ರೀತಿಯಲ್ಲಿ ಸಂವಿಧಾನದ ವಿಧಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಒಳ್ಳೆಯದಲ್ಲ. ಇದರಿಂದ ಸದನಕ್ಕೆ ಮಾತ್ರವಲ್ಲ ಸಂವಿಧಾನಕ್ಕೂ ಅಗೌರವ ತೋರಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.