ಮೈಸೂರು, ಮಾ.6 (ಎಂಕೆ)- ಸತ್ಯದಿಂದ ನಡೆದರೆ ಆನಂದ ದೊರಕುತ್ತದೆ. ಮಕ್ಕಳನ್ನು ಪ್ರೀತಿಯಿಂದ ಬೆಳೆಸುವಂತೆ ಸಸಿಗಳನ್ನೂ ಬೆಳೆಸಿ. ಚಿಕ್ಕವರು-ದೊಡ್ಡವರು ಎಲ್ಲಾ ಸೇರಿಕೊಂಡು ಗಿಡಮರಗಳನ್ನು ಬೆಳೆಸಲೇಬೇಕು ಎಂದು ಪದ್ಮಶ್ರೀ ಪುರಸ್ಕøತೆ ಸಾಲುಮರದ ತಿಮ್ಮಕ್ಕ ಅವರು ಹೇಳಿದರು.
ನಗರದ ಜೆಎಸ್‍ಎಸ್ ಫಾರ್ಮಸಿ ಕಾಲೇಜಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಎನ್‍ಎಸ್‍ಎಸ್ ಘಟಕದಿಂದ ಆಯೋಜಿಸಿದ್ದ ‘ರಾಷ್ಟ್ರೀಯ ಭಾವೈಕ್ಯತಾ ಶಿಬಿರ’ ಉದ್ಘಾಟಿಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರು, ಪುಟಾಣಿ ಮಕ್ಕಳಿಂದ ಗಿಡಗಳನ್ನು ನೆಡಿಸಿ, ಅವರಿಗೆ ಆರೈಕೆ ಮಾಡುವುದನ್ನು ಕಲಿಸಬೇಕು. ಗಿಡದ ಸುತ್ತಲೂ ಕಟ್ಟೆ(ಬೇಲಿ) ಕಟ್ಟಿಸಿ ಕುರಿ, ಮೇಕೆ, ದನಗಳು ತಿಂದುಹಾಕದಂತೆ ಎಚ್ಚರವಹಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ನಾನು, ನನ್ನ ಗಂಡ ಕುದೂರಿನಿಂದ ಹುಲಿಕಲ್ ತನಕ 4 ಕಿ.ಮೀ.ವರೆಗೂ ಗಿಡಗಳನ್ನು ನೆಟ್ಟು, ಬೆಳೆಸಿದೆವು. ಅವನ್ನು ಮಕ್ಕಳಂತೆ ನೋಡಿಕೊಂಡೆವು. ಇವತ್ತು ಆ ಗಿಡಗಳೆಲ್ಲಾ ಮೂವರು ತಬ್ಬುವಷ್ಟು ದೊಡ್ಡದಾಗಿ ಬೆಳೆದಿವೆ. ಎಲ್ಲವೂ ಹಸಿರಾಗಿವೆ ಎಂದು ತಮ್ಮ ಸಾಧನೆಯನ್ನು ತೆರೆದಿಟ್ಟರು. ನನಗೀಗ 108 ವರ್ಷ. ಪ್ರೀತಿಯಿಂದ ಕರೆದ ಕಡೆಗೆಲ್ಲಾ ಹೋಗುತ್ತೇನೆ. ಎಲ್ಲರಿಗೂ ಆರೋಗ್ಯ, ಐಶ್ವರ್ಯ, ಆನಂದ ದೊರಕಲಿ. ದೇಶಕ್ಕೆ ಒಳ್ಳೆಯದಾಗಬೇಕು ಎಂದು ಹಾರೈಸಿದರು.
ರಾಷ್ಟ್ರಪತಿ ಸ್ಮರಣೆ: ಪದ್ಮಶ್ರೀ ಬಂದಿದೆ ಎಂದು ದೆಹಲಿಗೆ ಕರೆಸಿಕೊಂಡರು. ರಾಷ್ಟ್ರಪತಿಗಳು ಪದ್ಮಶ್ರೀ ಪ್ರಶಸ್ತಿಯನ್ನು ಎಲ್ಲರಿಗೂ ಕೊಡುತ್ತಾ ಬಂದರು. ನನಗೆ ಕೊಡುವಾಗ ನಾನು ಅವರ ತಲೆ ಮೇಲೆ ಕೈಇಟ್ಟು ಆಶೀರ್ವಾದ ಮಾಡಿದ್ದೆ. ಅದು ದೊಡ್ಡ ಸುದ್ದಿಯಾಗಿತ್ತು. ರಾಷ್ಟ್ರಪತಿಗಳು ದೊಡ್ಡವರು ಅವರ ಆಶೀರ್ವಾದ ಎಲ್ಲರಿಗೂ ಸಿಗಬೇಕು ಎಂದರು. ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಅಧಿಕಾರಿ ಪೂರ್ಣಿಮಾ ಜೋಗಿ, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ನಿರ್ದೇಶಕ ಡಾ.ಪಿ.ಎ.ಕುಶಾಲಪ್ಪ, ರಿಜಿಸ್ಟ್ರಾರ್ ಬಿ.ಮಂಜುನಾಥ್, ಜೆಎಸ್‍ಎಸ್ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ. ಟಿ.ಎಂ.ಪ್ರಮೋದ್‍ಕುಮಾರ್, ಎನ್‍ಎಸ್‍ಎಸ್ ಸಂಚಾಲಕ ಕೆ.ಎಲ್.ಕೃಷ್ಣ ಮತ್ತಿತರರಿದ್ದರು.