ಮೈಸೂರು: ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿರುವ 18ನೇ ಶತ ಮಾನದ ಭೀಮಾ ಕೋರೆಗಾಂವ್ ಯುದ್ಧ, ಇದು ಸಾಮ್ರಾಜ್ಯವನ್ನು ಗೆದ್ದ ಯುದ್ಧವಲ್ಲ. ಸ್ವಾಭಿಮಾನಕ್ಕಾಗಿ ವ್ಯವಸ್ಥೆ ವಿರುದ್ಧ ಹೋರಾಡಿದ ಯುದ್ಧ ಎಂದು ಚಿಂತಕ ವಿಠ್ಠಲ್ ವಗ್ಗನ್ ಇಂದಿಲ್ಲಿ ತಿಳಿಸಿದರು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಮೈಸೂರು ಜಿಲ್ಲಾ ಸಮಿತಿ ಆಶ್ರಯದಲ್ಲಿ ಭಾನುವಾರ ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ `200ನೇ ಭೀಮಾ ಕೋರೆಗಾಂವ್ ವಿಜಯೋತ್ಸವ – ಬಚ್ಚಿಟ್ಟ ಭಾರತದ ನಿಜವಾದ ಇತಿಹಾಸ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಕೋರೆಗಾಂವ್ ಯುದ್ಧದ ಕುರಿತು ಅಧ್ಯಯನ ನಡೆಸಿದ ಡಾ.ಬಿ.ಆರ್.ಅಂಬೇ ಡ್ಕರ್ ಅವರು ದಿಗ್ಭ್ರಮೆಗೊಂಡು ಯುದ್ಧದ ಇತಿಹಾಸವನ್ನು ವಿಶ್ವಕ್ಕೆ ಸಾರುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಇಂತಹ ನೈಜ ಇತಿಹಾಸವನ್ನು ತಿರು ಚಲು ಜಾತಿವಾದಿ ಬಲಪಂಥೀಯರು ಮುಂದಾಗಿದ್ದಾರೆ. ದೇಶವನ್ನು ಬಲಪಂಥೀಯ ದೇಶವನ್ನಾಗಿ ಮಾರ್ಪಡಿಸುವ ಹುನ್ನಾರ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
33 ಕೋಟಿ ದೇವರನ್ನು ಹೊಂದಿ ದ್ದರೂ ನಮ್ಮ ದೇಶ ಇನ್ನೂ ಪ್ರಗತಿ ಕಂಡಿಲ್ಲ. ಆದರೆ 28 ಕೋಟಿ ಜನಸಂಖ್ಯೆ ಹೊಂದಿ ರುವ ಅಮೆರಿಕಾ ಇಡೀ ವಿಶ್ವವನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಇಲ್ಲಿ ಮನುಷ್ಯ ಶಕ್ತಿವಂತನೋ, ದೇವರು ಶಕ್ತಿವಂತನೋ ಎಂಬು ದನ್ನು ಜನರಿಗೆ ಮನವರಿಕೆ ಮಾಡಿಕೊಡ ಬೇಕಾಗಿದೆ ಎಂದು ಹೇಳಿದರು.
ಸೇನೆಯ ಜಿಲ್ಲಾಧ್ಯಕ್ಷ ಸಂತೋಷ್ ಸಿದ್ದಾರ್ಥ ಮಾತನಾಡಿ, 1857ರಲ್ಲಿ ಸಿಪಾಯಿ ದಂಗೆ ನಡೆಯಿತು ಎಂದು ಹೇಳುತ್ತೇವೆ. ಆದರೆ ಅದಕ್ಕಿಂತ 40 ವರ್ಷಗಳ ಹಿಂದೆಯೇ ಸಿಪಾಯಿ ದಂಗೆ ನಡೆದಿದೆ. ಭಾರತದ ಇತಿಹಾಸವನ್ನು ತಿರುಚಿದ ಕಾರಣ ಇದು ಅಂಬೇಡ್ಕರ್ ಅವರು ಸಂಶೋಧನೆ ನಡೆಸು ವವರೆಗೂ ತಿಳಿದಿರಲಿಲ್ಲ. ಭೀಮಾ ಕೋರೆ ಗಾಂವ್ ಯುದ್ಧ ದಲಿತರ ಸ್ವಾಭಿಮಾನದ ಸಂಕೇತ ಎಂದರು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್.ಕೋದಂಡ ರಾಮ್ ಅಧ್ಯಕ್ಷತೆ ವಹಿಸಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ರಾಜ್ಯ ಉಪಾಧ್ಯಕ್ಷ ಎಂ.ಆನಂದ ಕುಮಾರ್, ಪ್ರಧಾನ ಕಾರ್ಯದರ್ಶಿ ಜೆ.ಇ. ಮಂಜುನಾಥ್, ಹಾಸನ ಜಿಲ್ಲಾಧ್ಯಕ್ಷ ಶಶಿಕುಮಾರ್, ಕೋಲಾರ ಜಿಲ್ಲಾಧ್ಯಕ್ಷ ಹೆಬ್ಬುಲಿ ಅರ್ಜುನ, ಮೈಸೂರು ಜಿಲ್ಲಾ ಕಾರ್ಯದರ್ಶಿ ಎಂ.ಕೆ.ಕಾಂತರಾಜು, ಸಂಚಾಲಕ ಮೂಡಹಳ್ಳಿ ಮಹದೇವು, ಸಂಘಟನಾ ಕಾರ್ಯದರ್ಶಿ ಶಿವರಾಜ್ ಆಲತ್ತೂರು ಇನ್ನಿತರರು ಉಪಸ್ಥಿತರಿದ್ದರು.