ಗಮನ ಸೆಳೆದ ನಾನಾ ನಮೂನೆಯ ಸಕ್ಕರೆ ಅಚ್ಚುಗಳ ಪ್ರದರ್ಶನ
ಮೈಸೂರು

ಗಮನ ಸೆಳೆದ ನಾನಾ ನಮೂನೆಯ ಸಕ್ಕರೆ ಅಚ್ಚುಗಳ ಪ್ರದರ್ಶನ

January 14, 2019

ಮೈಸೂರು: ಮೈಸೂರಿನ ಅಗ್ರಹಾರದ ಶಾರದಾ ಪ್ರಸಾದ ಭವನದಲ್ಲಿ ಭಾನುವಾರ ನಾನಾ ಮಾದರಿಯ, ವಿವಿಧ ಆಕಾರದ ಸಕ್ಕರೆ ಅಚ್ಚುಗಳ ಪ್ರದರ್ಶನ ನಡೆಯಿತು.

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅರಿವು ಸಂಸ್ಥೆ ಸಕ್ಕರೆ ಅಚ್ಚುಗಳ ಪ್ರದರ್ಶನ ಸ್ಪರ್ಧೆ ಏರ್ಪಡಿಸಿತ್ತು. ನಗರದ ಅರಿವು ಸಂಸ್ಥೆಯ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಕ್ಕರೆ ಅಚ್ಚು ತಯಾರಿಸುವ ಸ್ಪರ್ಧೆ ನಡೆಯಿತು. ಬಣ್ಣ, ಬಣ್ಣದ ನಾನಾ ನಮೂನೆಯ ಸಕ್ಕರೆ ಅಚ್ಚುಗಳನ್ನು ಮೈಸೂರಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳು ತಂದು ಪ್ರದರ್ಶಿಸಿದರು.

ಸ್ಪರ್ಧೆಯಲ್ಲಿ 32 ಮಂದಿ ಭಾಗವಹಿಸಿದ್ದರು. ತಯಾರಿಕೆ, ಶುಚಿ, ರುಚಿ, ಆಕಾರ ಮತ್ತು ನಮೂನೆಗಳನ್ನು ಆಧರಿಸಿ ತೀರ್ಪುಗಾರರು ಮೂವರನ್ನು ಆಯ್ಕೆ ಮಾಡಿದರು. ಅಗ್ರಹಾರದ ಕುಸುಮಾ ಕುಮಾರಿ (ಪ್ರಥಮ), ಡಿ.ಸುಬ್ಬಯ್ಯ ರಸ್ತೆಯ ಹೇಮಾ ರಮಾನಾಥ್ (ದ್ವಿತೀಯ) ಮತ್ತು ಪಿರಿಯಾಪಟ್ಟಣದ ರುದ್ರಮ್ಮ (ತೃತೀಯ) ಬಹುಮಾನಗಳನ್ನು ಪಡೆದರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರಿಗೆ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್ ಬಹುಮಾನಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಸಂಕ್ರಾಂತಿ ಹಬ್ಬ ರೈತಾಪಿ ವರ್ಗದ ಜನರ ಮತ್ತು ಜಾನುವಾರು ಗಳ ನಡುವಿನ ಬಾಂಧವ್ಯವನ್ನು ಸಾರುತ್ತದೆ. ಈ ಹಬ್ಬದ ಪ್ರಮುಖ ಆಕರ್ಷಣೆ ಸಕ್ಕರೆ ಅಚ್ಚು. ಇದು ಮರೆಯಾಗುತ್ತಿದೆ ಎನ್ನುವುದಕ್ಕಿಂದ ಇಂದಿನ ಯುವತಿಯರಿಗೆ ಇದರ ತಯಾರಿಕೆ ಮತ್ತು ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಈ ಸಂಸ್ಕøತಿಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದರು.

ಸಮಾಜ ಸೇವಕ ಡಾ.ರಘುರಾಂ ವಾಜಪೇಯಿ ಮಾತನಾಡಿ, ವರ್ಷಪೂರ್ತಿ ದುಡಿದು ದಣಿದ ರಾಸುಗಳಿಗೆ ಸಿಂಗಾರ ಮಾಡಿ ತನ್ನ ಕುಟುಂಬ ಮತ್ತು ಸಹೋದ್ಯೋಗಿಗಳೊಡನೆ ಸಂತಸದಿಂದ ಅಚರಿಸುವ ಹಬ್ಬ ಸಂಕ್ರಾಂತಿ. ಎಳ್ಳು ಮತ್ತು ಸಕ್ಕರೆ ಅಚ್ಚನ್ನು ಹಿಂದೆ ಗೃಹಿಣಿಯರು ತಮ್ಮ ಬಂಧುಗಳೊಂದಿಗೆ ಕೂಡಿ ಶಿಸ್ತಿನಿಂದ ತಯಾರಿಸುತ್ತಿದ್ದರು. ಆದರೆ ಅಚ್ಚುಗಳು ಅಂಗಡಿಗಳಲ್ಲೇ ಲಭ್ಯವಾ ಗುತ್ತದೆಂಬ ಕಾರಣಕ್ಕೆ ಮನೆಯಲ್ಲಿ ತಯಾರು ಮಾಡುವ ಕಲೆ ಮಾಯವಾಗುತ್ತಿದೆ. ಇಂತಹ ಸ್ಪರ್ಧೆ ಮೂಲಕ ಇದಕ್ಕೆ ಮರು ಜೀವ ನೀಡಲು ಅರಿವು ಸಂಸ್ಥೆ ಮುಂದಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಚಿತ್ರನಟಿ, ನಿರ್ದೇಶಕಿ ರೂಪಾ ಅಯ್ಯರ್, ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂಡಿ.ಪಾರ್ಥಸಾರಥಿ, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಹೆಚ್.ವಿ.ಭಾಸ್ಕರ್, ಲಯನ್ಸ್ ಸಂಸ್ಥೆಯ ಅಶ್ವತ್ಥ ನಾರಾಯಣ, ಮೈಕ್ ಚಂದ್ರು, ಬಿಜೆಪಿ ಮಹಿಳಾ ಘಟಕದ ಲಕ್ಷ್ಮೀದೇವಿ, ಸೌಭಾಗ್ಯ ಮೂರ್ತಿ, ಬ್ರಾಹ್ಮಣ ಯುವ ಮುಖಂಡ ನಿಶಾಂತ್, ಯುವ ಬ್ರಾಹ್ಮಣ ವೇದಿಕೆಯ ಶ್ರೀಧರಮೂರ್ತಿ, ರಂಗನಾಥ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಬಿಎಸ್‍ಪಿ ಜಿಲ್ಲಾಧ್ಯಕ್ಷ ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.

Translate »