ಓಆರ್‍ಐ ತಾಳೆಗರಿ ಹಸ್ತಪ್ರತಿಗೆ ಡಿಜಿಟಲ್ ಸ್ಪರ್ಶ ನೀಡಲು ಚಿಂತನೆ
ಮೈಸೂರು

ಓಆರ್‍ಐ ತಾಳೆಗರಿ ಹಸ್ತಪ್ರತಿಗೆ ಡಿಜಿಟಲ್ ಸ್ಪರ್ಶ ನೀಡಲು ಚಿಂತನೆ

January 9, 2020

 ಸಂಸದ ಪ್ರತಾಪ್ ಸಿಂಹ ಸಮ್ಮುಖದಲ್ಲಿ ತಾರಾ ಪ್ರಕಾಶನ ಜತೆ ಮಾತುಕತೆ  ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಸಿಸ್ಟಮ್ ತಂತ್ರಜ್ಞಾನ ಬಳಕೆ

ಮೈಸೂರು,ಜ.8(ಪಿಎಂ)-ತಾಳೆಗರಿ ಹಸ್ತಪ್ರತಿಗಳು ಪ್ರಾಚೀನ ಕಾಲದ ಜ್ಞಾನ ಕಣಜ. ಇಂತಹ ಜ್ಞಾನ ಭಂಡಾರದ ಸಂರ ಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ (ಓಆರ್‍ಐ) `ಕೌಟಿಲ್ಯನ ಅರ್ಥಶಾಸ್ತ್ರ’ ಗ್ರಂಥದ ಮೂಲ ತಾಳೆಗರಿ ಹಸ್ತಪ್ರತಿ ಸೇರಿದಂತೆ 70 ಸಾವಿ ರಕ್ಕೂ ಹೆಚ್ಚು ತಾಳೆಗರಿ ಜ್ಞಾನ ಸಂಪತ್ತು ಶೇಖರಣೆಗೊಂಡು ಸಂರಕ್ಷಣೆಗೊಂಡಿವೆ.

ಇದೀಗ ಇಲ್ಲಿನ ಹಸ್ತಪ್ರತಿಗಳಿಗೆ ಡಿಜಿ ಟಲ್ ಸ್ಪರ್ಶ ನೀಡಿ ಆಸಕ್ತರಿಗೆ ಲಭ್ಯವಾಗು ವಂತೆ ಮಾಡುವ ಮಹತ್ವದ ಯೋಜನೆ ಕೈಗೆತ್ತಿಕೊಳ್ಳುವ ಸಂಬಂಧ ಬುಧವಾರ ಪ್ರಾಥಮಿಕ ಹಂತದ ಮಾತುಕತೆ ನಡೆಯಿತು. ಬೆಂಗಳೂರಿನ `ತಾರಾ ಪ್ರಕಾಶನ’ ತಾಳೆಗರಿ ಹಸ್ತಪ್ರತಿಗಳಿಗೆ ಡಿಜಿಟಲ್ ರೂಪ ನೀಡಿ ಸಂರಕ್ಷಿಸುವ ಕಾರ್ಯದಲ್ಲಿ ಪರಿಣತಿ ಹೊಂದಿದೆ. ಈ ಸಂಸ್ಥೆ ಓಆರ್‍ಐನ ತಾಳೆಗರಿ ಹಸ್ತಪ್ರತಿ ಗಳಿಗೆ ಡಿಜಿಟಲ್ ರೂಪ ನೀಡಲು ಉತ್ಸು ಕತೆ ತೋರಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಈ ಮಹತ್ವದ ಯೋಜನೆಗೆ ಚಾಲನೆ ದೊರೆಯಲಿದೆ.

ಓಆರ್‍ಐಗೆ ಭೇಟಿ ನೀಡಿದ್ದರು. ಬೆಂಗಳೂರಿನ ತಾರಾ ಪ್ರಕಾಶನದ ಸಂಸ್ಥಾಪಕ ಟ್ರಸ್ಟಿಯೂ ಆದ ಅಮೆರಿಕ ನ್ಯೂಯಾರ್ಕ್‍ನ ರೋಚೆಸ್ಟರ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾ ಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿರುವ ಪ್ರೊ.ಪಿ.ಆರ್.ಮುಕುಂದ್ ಅವರೊಂದಿಗೆ ಭೇಟಿ ನೀಡಿದ ಪ್ರತಾಪ್ ಸಿಂಹ ಅವರು, ಮೈಸೂರು ವಿವಿ ಆಡಳಿ ತಾಂಗ ಕುಲಸಚಿವ ಪ್ರೊ.ಆರ್.ಶಿವಪ್ಪ ಹಾಗೂ ಪ್ರಾಚ್ಯವಿದ್ಯಾ ಸಂಶೋಧನಾ ಲಯದ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಅವರೊಂದಿಗೆ ಚರ್ಚೆ ನಡೆಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೊ.ಪಿ.ಆರ್.ಮುಕುಂದ್, ನಮ್ಮ ತಾರಾ ಪ್ರಕಾಶನ ವೈದಿಕ ಸಂಪ್ರ ದಾಯದ ಪ್ರಾಚೀನ ತಾಳೆಗರಿ ಹಸ್ತಪ್ರತಿ ಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅದರ ಜ್ಞಾನ ಪಸರಿಸುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. `ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಸಿಸ್ಟಮ್’ ತಂತ್ರಜ್ಞಾನ ಬಳಸಿ ಎರಡು ವಿಧದಲ್ಲಿ ಸಂರಕ್ಷಿಸುವ ವಿಧಾನ ನಮ್ಮಲ್ಲಿದೆ. ಒಂದು ಇಮೇಜ್ ತೆಗೆದ ಬಳಿಕ ಆರ್ಕೈವಲ್ ಪೇಪರ್ ಮೇಲೆ ಮುದ್ರಿಸುವು ದಾಗಿದೆ. ಇದು 200ರಿಂದ 250 ವರ್ಷ ಗಳ ಬಾಳಿಕೆ ಬರಲಿದೆ ಎಂದರು.

ಮತ್ತೊಂದು ವಿಧಾನವೆಂದರೆ, `ವೇಫರ್ಫಿಚೆ’ ಎಂಬ ಟೆಕ್ನಾಲಜಿ ಮೂಲಕ ತಾಳೆಗರಿ ಗಳನ್ನು ಅರೆವಾಹಕ ಪ್ರಕ್ರಿಯೆಯಲ್ಲಿ ಮೆಟಲ್ ಹಾಗೂ ಗೋಲ್ಡ್ ಪ್ಲೇಟ್‍ಗಳಲ್ಲಿ ಸಂಗ್ರಹಿಸಿ ಡುವುದಾಗಿದೆ. ಇದು ಬೆಂಕಿ ತಗುಲಿದರೂ, ಇಲ್ಲವೇ ನೀರು ಬಿದ್ದರೂ ಹಾನಿಗೆ ಒಳಗಾ ಗುವುದಿಲ್ಲ. ಇದನ್ನು ಸಾವಿರ ವರ್ಷಗಳ ಬಳಿಕವೂ ಯಾವುದೇ ತಂತ್ರಜ್ಞಾನ ಅಗತ್ಯ ವಿಲ್ಲದೆ, ಭೂತಗನ್ನಡಿ ಮೂಲಕ ಓದಲು ಸಾಧ್ಯವಿದೆ. ಗೋಲ್ಡ್ ದುಬಾರಿ ಆದ್ದರಿಂದ ಬೇಕಿದ್ದರೆ ಅಲ್ಯುಮಿನಿಯಂ ಪ್ಲೇಟ್ ಬಳಸಿ ಕೊಳ್ಳಲು ಅವಕಾಶವಿದೆ. ಈ ಮುಂದುವರೆದ ತಂತ್ರಜ್ಞಾನ ಬಳಕೆ ಮಾಡುವುದರಿಂದ ಮೂಲ ತಾಳೆಗರಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಓಆರ್‍ಐ ನಿರ್ದೇಶಕ ಡಾ.ಎಸ್.ಶಿವ ರಾಜಪ್ಪ ಮಾತನಾಡಿ, ಕೌಟಿಲ್ಯನ ಅರ್ಥ ಶಾಸ್ತ್ರದ ಮೂಲ ತಾಳೆಗರಿ ಪ್ರತಿ ನಮ್ಮ ಓಆರ್‍ಐನಲ್ಲಿದೆ. ವಿಶ್ವದ ಎಲ್ಲಾ ಭಾಷೆಗೂ ತರ್ಜುಮೆಯಾಗಿರುವ ಕೌಟಿಲ್ಯನ ಅರ್ಥ ಶಾಸ್ತ್ರ ಮಹತ್ವದ ಗ್ರಂಥ. ಇದರಲ್ಲಿ ಕಟ್ಟಕಡೆ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ಆಶಯಗಳನ್ನು ಕಾಣಬಹುದು. ಇಂತಹ ಹಲವು ಅಪರೂಪದ ತಾಳೆಗರಿ ರೂಪದ ಲ್ಲಿರುವ ಗ್ರಂಥಗಳನ್ನು ಸಂರಕ್ಷಿಸುವುದು ಅಗತ್ಯ. ನಮ್ಮಲ್ಲಿರುವ ಒಟ್ಟು ತಾಳೆಗರಿ ಪೈಕಿ ಶೇ.30ರಷ್ಟು ಆರ್ಯುವೇದಕ್ಕೆ ಸಂಬಂಧಿ ಸಿವೆ. ಮೈಸೂರು ವಿವಿ ಈಗಾಗಲೇ ಸ್ಕ್ಯಾನ್, ಕ್ಯಾಟಲಾಗ್ ಸೇರಿದಂತೆ ಹಲವು ತಂತ್ರ ಜ್ಞಾನದ ಮೂಲಕ ಸಂರಕ್ಷಿಸುವ ಪ್ರಯತ್ನ ಮಾಡಿದೆ. ಮಲ್ಟಿ ಸ್ಪೆಕ್ಟ್ರಲ್ ಇಮೇಜಿಂಗ್ ಸಿಸ್ಟಮ್‍ನಿಂದ ಡಿಜಿಟಲೀಕರಣಗೊಂಡರೆ ಜನಸಾಮಾನ್ಯರೂ ಮೊಬೈಲ್ ಫೋನ್ ಮೂಲಕ ತಾಳೆಗರಿ ಜ್ಞಾನವನ್ನು ಪಡೆದು ಕೊಳ್ಳಲು ಸಾಧ್ಯವಿದೆ ಎಂದರು.

ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ.ಆರ್. ಶಿವಪ್ಪ, ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅವರ ಆಪ್ತ ಕಾರ್ಯದರ್ಶಿ ಡಾ.ಚೇತನ್, ವಿವಿ ಸಂಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಮಹದೇಶ್ ಮತ್ತಿತರರು ಹಾಜರಿದ್ದರು.

ಡಿಜಿಟಲೀಕರಣಕ್ಕೆ ಕೇಂದ್ರ, ರಾಜ್ಯ ಸರ್ಕಾರದ ನೆರವು
ಮೈಸೂರು, ಜ.8(ಪಿಎಂ)- ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ತಾಳೆಗರಿ ಹಸ್ತಪ್ರತಿಗಳ ಸಂರಕ್ಷಣೆಗಾಗಿ `ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಸಿಸ್ಟಮ್’ ತಂತ್ರಜ್ಞಾನ ಬಳಸಿ ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೆರವಿಗೆ ಮನವಿ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಓಆರ್‍ಐನ ತಾಳೆಗರಿಗಳನ್ನು ಸಂರಕ್ಷಣೆ ಮಾಡುವುದು ಮುಂದಿನ ಪೀಳಿಗೆ ದೃಷ್ಟಿಯಲ್ಲಿ ಬಹಳ ಮುಖ್ಯ. ಹೀಗಾಗಿ ಎಷ್ಟೇ ವೆಚ್ಚವಾದರೂ ತಾಳೆಗರಿಯಲ್ಲಿರುವ ಜ್ಞಾನ ಸಂಪತ್ತು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್‍ನಾರಾಯಣ ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ನಡೆಸಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂತಹ ಮಹತ್ವದ ಕಾರ್ಯಗಳಿಗೆ ಆರ್ಥಿಕ ನೆರವು ನೀಡಲು ಹಿಂದೇಟು ಹಾಕುವವರಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಅಗತ್ಯವಿರುವ ಅನುದಾನ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ಓಆರ್‍ಐನಲ್ಲಿರುವ ಕೌಟಿಲ್ಯ ಅರ್ಥಶಾಸ್ತ್ರದ ತಾಳೆಗರಿಗೆ ಹಾನಿಯಾಗಿದೆ ಎಂದು ವರದಿಯಾಗಿತ್ತು. ಆದರೆ ಆ ರೀತಿ ಯಾವುದೇ ಹಾನಿಯಾಗದಿರುವುದನ್ನು ಮೈಸೂರು ವಿವಿ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಪ್ರೊ.ಮುಕುಂದ್ ಅವರನ್ನು ಭೇಟಿಯಾಗಲು ಅವಕಾಶ ಲಭಿಸಿತ್ತು. ಇವರು 20 ವರ್ಷಗಳಿಂದ ತಾಳೆಗರಿ ಸಂರಕ್ಷಣೆಗೆ ಉನ್ನತ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ದ್ದಾರೆ. ಹೀಗಾಗಿ ಇವರ ತಂತ್ರಜ್ಞಾನವನ್ನು ಓಆರ್‍ಐಗೂ ಪರಿಚಯಿಸುವ ನಿಟ್ಟಿನಲ್ಲಿ ಇಂದು ಪ್ರಾಥಮಿಕ ಹಂತದ ಮಾತುಕತೆ ನಡೆದಿದ್ದು, ಸದ್ಯದಲ್ಲೇ ಎಂಓಯು ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ಬಗ್ಗೆ ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅವರು ಸಹ ಆಸಕ್ತಿ ಹೊಂದಿದ್ದಾರೆ. ಈ ಡಿಜಿಟಲೀಕರಣದ ಮೂಲಕ ತಾಳೆಗರಿಯಲ್ಲಿರುವ ಜ್ಞಾನವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Translate »