ಮೆಡಿಕಲ್ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ಅವ್ಯವಹಾರ
ಮೈಸೂರು

ಮೆಡಿಕಲ್ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ಅವ್ಯವಹಾರ

February 25, 2020

 ನಿವೃತ್ತ ಡಿಜಿಪಿ ಶಂಕರ್ ಬಿದರಿ ಆರೋಪ
 ಸಚಿವ ಡಾ.ಸುಧಾಕರ್ ಪರಿಶೀಲನೆ ಭರವಸೆ
ಬೆಂಗಳೂರು, ಫೆ.24(ಕೆಎಂಶಿ)- ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದರೂ, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮೌನ ವಹಿಸಿದಂತಿದೆ.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅವರೇ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಸೀಟ್ ಬ್ಲಾಕಿಂಗ್‍ನಿಂದ ಸಾವಿರಾರು ಕೋಟಿ ರೂ. ಅವ್ಯವಹಾರದ ಆರೋಪ ಮಾಡಿದ್ದರು.

ಈ ಸಂಬಂಧ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಸಚಿವರು, ಬಿದರಿ ಹಿರಿಯ ಪೊಲೀಸ್ ಅಧಿಕಾರಿ ಆಗಿದ್ದವರು. ಅವರು ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡುವ ಬದಲು ನನ್ನ ಬಳಿ ದೂರು ಕೊಡಬಹುದಿತ್ತು.

ಸಾಮಾಜಿಕ ಜಾಲತಾಣದಲ್ಲಿ ಯಾರು ಬೇಕಾದರೂ ಸುಲಭವಾಗಿ ಆರೋಪ ಮಾಡಬಹುದು. ಶಂಕರ್ ಬಿದರಿಯವರು ನನಗೆ ಇನ್ನೂ ದೂರು ಕೊಟ್ಟಿಲ್ಲ. ಸೀಟ್ ಬ್ಲಾಕಿಂಗ್ ಬಗ್ಗೆ ಅವರು ಮಾಡಿದ ಆರೋಪ ಸಂಬಂಧ ದಾಖಲೆಗಳನ್ನು ಇನ್ನೂ ನನಗೆ ತಂದು ಕೊಟ್ಟಿಲ್ಲ. ದಾಖಲೆ ತಂದು ಕೊಟ್ಟರೆ ಅದರ ಸಂಬಂಧ ಪರಿಶೀಲನೆ ಮಾಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿದರಿಯವರು ನನಗೆ ದೂರು ಕೊಟ್ಟಿದ್ದರೆ ಸುಲಭವಿತ್ತು. ಅವರು ದೂರು ಕೊಟ್ಟ ಬಳಿಕ ಅದರಲ್ಲಿ ನಿಜಾಂಶವಿದ್ದರೆ ತನಿಖೆಗೆ ಒಳಪಡಿಸುತ್ತೇನೆ ಎಂದು ಹೇಳಿದರು.

Translate »