ಮೈಸೂರಲ್ಲಿ ಸಾವಿರಾರು ವಿದ್ಯಾರ್ಥಿಗಳ ಆಕ್ರೋಶ
ಮೈಸೂರು

ಮೈಸೂರಲ್ಲಿ ಸಾವಿರಾರು ವಿದ್ಯಾರ್ಥಿಗಳ ಆಕ್ರೋಶ

February 17, 2019

ಮೈಸೂರು: ಜಮ್ಮುವಿನ ಪುಲ್ವಾಮಾದಲ್ಲಿ ನಡೆದ ಉಗ್ರರ ನೀಚ ಕೃತ್ಯ ಖಂಡಿಸಿ ಮೈಸೂರಿನಲ್ಲಿ ಶನಿವಾರ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ರಸ್ತೆಗಿಳಿದು ಮಾನವ ಸರಪಳಿ ರಚಿಸಿ, ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಭಾರತೀಯ ಯೋಧರೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದರು. ಮೈಸೂ ರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು, ಎಸ್‍ಜೆಸಿಇ, ಜೆಎಸ್‍ಎಸ್ ಪಾಲಿಟೆಕ್ನಿಕ್, ಡಿಎಂಎಸ್, ಮಹಾರಾಣಿ ಕಾಲೇಜು ವಿದ್ಯಾರ್ಥಿಗಳು ಪ್ರತ್ಯೇಕವಾಗಿ ರಸ್ತೆಗಿಳಿದು ಭಯೋತ್ಪಾದಕರ ಹೇಯ ಕೃತ್ಯವನ್ನು ಖಂಡಿಸಿ, ಜಾಥಾ ನಡೆಸಿದರು. ಬಳಿಕ ವಿವಿಧ ವೃತ್ತಗಳಲ್ಲಿ ಮಾನವ ಸರಪಳಿ ರಚಿಸಿ ಭಾರತಾಂಬೆಗೆ ಜೈಕಾರ ಮೊಳಗಿಸಿದರಲ್ಲದೆ, ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿದರು. ಅಲ್ಲದೆ ಭಾರತೀಯ ಸೈನ್ಯಕ್ಕೆ ಜಯಘೋಷ ಹಾಕಿ, ಸೈನಿಕರೊಂದಿಗೆ ನಾವಿದ್ದೇವೆ. ದಾಳಿಯಿಂದ ಧೃತಿಗೆಡದಂತೆ ಕೋರಿದರು.

ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ದೇವರಾಜ ರಸ್ತೆ, ಜೆಎಲ್‍ಬಿ ರಸ್ತೆಯ ಜಂಕ್ಷನ್‍ನಲ್ಲಿ ಮಾನವ ಸರಪಳಿ ನಿರ್ಮಿಸಿ ಉಗ್ರರ ದಾಳಿಯನ್ನು ಖಂಡಿಸಿದರು. ಅಲ್ಲದೆ ನಮ್ಮ ದೇಶ ಕಾಯುವ ಸೈನಿಕರಿಗೆ ಮಹತ್ವ ನೀಡಬೇಕು. ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ತೆಗೆದು ಹಾಕಿ, ಭಾರತ ಸಂವಿಧಾನ ದೊಳಗೆ ಸೇರಿಸಿ ಎಂದು ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು ರ್ಯಾಲಿ ನಡೆಸಿದರು. ವಿದ್ಯಾವರ್ಧಕ ಕಾಲೇಜಿನ ನೂರಾರು ವಿದ್ಯಾರ್ಥಿ ಗಳು ದಿವಾನ್ಸ್ ರಸ್ತೆ ಮೂಲಕ ದೇವರಾಜ ರಸ್ತೆ, ಜೆಎಲ್‍ಬಿ ರಸ್ತೆಯಲ್ಲಿ ಜಾಥಾ ನಡೆಸಿದರು. ದೇವರಾಜ ರಸ್ತೆ ಜಂಕ್ಷನ್‍ನಲ್ಲಿ ಮಾನವ ಸರಪಳಿ ರಚಿಸಿ ರಸ್ತೆಯಲ್ಲೇ ಮೌನಾಚರಿಸಿ, ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿದರು. ಜೆಎಸ್‍ಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಹುಣಸೂರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಭಾರತೀಯ ಯೋಧರ ಪರವಾಗಿ ಘೋಷಣಾ ಫಲಕ ಹಿಡಿದಿದ್ದ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಭಾರತಾಂಬೆ ಹಾಗೂ ಭಾರತೀಯ ಸೈನ್ಯಕ್ಕೆ ಜೈಕಾರ ಮೊಳಗಿಸಿದರು. ಇದರೊಂದಿಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ರಸ್ತೆಗಿಳಿದು ಕಂಬನಿ ಮಿಡಿ ದರು. ಯೋಧರ ಕುಟುಂಬ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿದರು.

Translate »