ಮೂವರು ವಿದ್ಯಾರ್ಥಿನಿಯರು ನಾಪತ್ತೆ
ಮೈಸೂರು

ಮೂವರು ವಿದ್ಯಾರ್ಥಿನಿಯರು ನಾಪತ್ತೆ

December 14, 2018

ಮೈಸೂರು: ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಆಲನಹಳ್ಳಿ ಮತ್ತು ಇಲವಾಲ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದೆ.

ವಿದ್ಯಾವಿಕಾಸ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಇಡಿ ವ್ಯಾಸಂಗ ಮಾಡುತ್ತಿರುವ ಟಿ.ವಿ.ರಾಣಿ (24) ಡಿ.3ರಂದು ಬೆಳಿಗ್ಗೆ 8.30 ಗಂಟೆಗೆ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ ಎಂದು ಮನೆಯಿಂದ ಹೋಗಿದ್ದು, ಸಂಜೆ 6.30ರ ವೇಳೆಗೆ ತಂದೆಗೆ ಮೊಬೈಲ್‍ನಿಂದ ಕರೆ ಮಾಡಿ ತಾನು ಒಬ್ಬ ಹುಡುಗನನ್ನು ಮದುವೆಯಾಗುತ್ತಿರು ವುದಾಗಿಯೂ, ತಮಗೆ ಕಾಲೇಜಿನ ಉಪನ್ಯಾಸಕರೇ ಮದುವೆ ಮಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾಳೆ ಎಂದು ಆಕೆಯ ತಂದೆ ವೆಂಕಟರಮಣ ನಾಯ್ಕ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅಂದಿ ನಿಂದಲೂ ಆಕೆ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿದ್ದಾರೆ.

ಎಸ್‍ಎನ್‍ಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಂಜನಾ (17) ನ.28ರಂದು ಬೆಳಿಗ್ಗೆ 8.30ರಲ್ಲಿ ತನಗೆ ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಲಾಗಿ, ಆಕೆಯನ್ನು ತಂದೆ ಕಾಲೇಜಿಗೆ ಬಿಟ್ಟು ಬಂದಿದ್ದಾರೆ. ನಂತರ 11.30ರಲ್ಲಿ ಕಾಲೇಜಿನ ಉಪನ್ಯಾಸಕರು ಆಕೆಯ ತಂದೆಗೆ ಕರೆ ಮಾಡಿ ಸಂಜನಾ ಕಾಲೇಜಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಈವರೆವಿಗೂ ತನ್ನ ಮಗಳು ಮನೆಗೆ ವಾಪಸ್ಸಾಗಿಲ್ಲ ಎಂದು ಸಂಜನಾ ತಂದೆ ಆಲನಹಳ್ಳಿ ಠಾಣೆ ಪೊಲೀ ಸರಿಗೆ ದೂರು ಸಲ್ಲಿಸಿದ್ದಾರೆ. ಇವೆರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಆಲನ ಹಳ್ಳಿ ಪೊಲೀಸರು ಈ ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ಇರುವವರು ಠಾಣೆಯ ದೂರವಾಣಿ ಸಂಖ್ಯೆ 0821-2418311 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 2418339 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಮರಹಳ್ಳಿ ಗ್ರಾಮದ ಚಿಕ್ಕಣ್ಣ ಎಂಬುವರ ಪುತ್ರಿ ಸಿ.ಸವಿತಾ (18) ಡಿ.7ರಂದು ರಾತ್ರಿ ಮನೆಯಲ್ಲಿ ಓದುತ್ತಾ ಮಲಗಿದ್ದಳು. ಮರು ದಿನ ಬೆಳಿಗ್ಗೆ ಎದ್ದು ನೋಡಿದಾಗ ಆಕೆ ಕಾಣಲಿಲ್ಲ. ಅಂದಿನಿಂದ ಈವರೆಗೂ ಮನೆಗೆ ವಾಪಸ್ಸಾಗಿಲ್ಲ ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈಕೆಯ ಬಗ್ಗೆ ಮಾಹಿತಿ ಇರುವವರು ಇಲವಾಲ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0821-2402222 ಅನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

Translate »