ಪ್ರತ್ಯೇಕ ಮೂರು ಪ್ರಕರಣ ಚಿನ್ನಾಭರಣ, ಬೆಳ್ಳಿ ಪದಾರ್ಥ, ಮೊಬೈಲ್ ಕಳವು
ಮೈಸೂರು

ಪ್ರತ್ಯೇಕ ಮೂರು ಪ್ರಕರಣ ಚಿನ್ನಾಭರಣ, ಬೆಳ್ಳಿ ಪದಾರ್ಥ, ಮೊಬೈಲ್ ಕಳವು

September 5, 2019

ಮೈಸೂರು, ಸೆ.4(ಎಸ್‍ಪಿಎನ್)-ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 75 ಗ್ರಾಂ ಚಿನ್ನಾಭರಣ, 80 ಗ್ರಾಂ ಬೆಳ್ಳಿ ಪದಾರ್ಥ ಹಾಗೂ 2 ಮೊಬೈಲ್ ಕಳ್ಳತನವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

25 ಗ್ರಾಂ ಚಿನ್ನಾಭರಣ ಕಳವು: ಆಲನಹಳ್ಳಿ ನಿವಾಸಿ ಮಹದೇವ ಪ್ರಸಾದ್ ಎಂಬುವರ ಮನೆ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಖದೀಮರು, ಬೀರು ವಿನಲ್ಲಿದ್ದ 25 ಗ್ರಾಂ ಚಿನ್ನಾಭರಣ ಹಾಗೂ 80 ಗ್ರಾಂ ಬೆಳ್ಳಿ ಪದಾರ್ಥಗಳನ್ನು ದೋಚಿ ಪರಾರಿಯಾಗಿದ್ದಾರೆ. ಸೆ.2ರಂದು ಮಹದೇವಪ್ರಸಾದ್ ಬೆಳಿಗ್ಗೆ 8 ಗಂಟೆಗೆ ಕುಟುಂಬ ಸಮೇತ ಊರಿಗೆ ತೆರಳಿ ಪುನಃ ಬೆಳಿಗ್ಗೆ ಬಂದು ನೋಡಿದಾಗ ಈ ಘಟನೆ ನಡೆದಿತ್ತು. ಈ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

50 ಗ್ರಾಂ ಚಿನ್ನಾಭರಣ ಕಳವು: ಶ್ರೀರಾಂಪುರ 2ನೇ ಹಂತದ ನಿವಾಸಿ ವಿಜಯ ಲಕ್ಷ್ಮೀ ಎಂಬುವವರು ಈಶ್ವರಿ ಬ್ರಹ್ಮಕುಮಾರಿ ವಿದ್ಯಾಲಯ ರಸ್ತೆಯ ಅಮೃತ್ ಬೇಕರಿ ಬಳಿ ಸೆ.1ರಂದು ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿ ಯಿಂದ ಬೈಕ್‍ನಲ್ಲಿ ಬಂದ ಖದೀಮರು ವಿಜಯಲಕ್ಷ್ಮಿ ಅವರ 50 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

2 ಮೊಬೈಲ್ ಕಳವು: ಎನ್.ಆರ್.ಮೊಹಲ್ಲಾದ ಕೆ.ಆರ್.ಕಾಲೋನಿ ನಿವಾಸಿ ಮಹೇಶ್ ಕುಮಾರ್ ಅವರು ಆ.30 ರಂದು ಮನೆ ಮುಂದೆ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಾಗ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್‍ನಲ್ಲಿ ಬಂದ ಖದೀಮರು, ವಿಳಾಸ ಕೇಳುವ ನೆಪದಲ್ಲಿ ಮಹೇಶ್ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ಮಹೇಶ್ ಅವರ ಗಮನ ಬೇರೆಡೆ ಸೆಳೆದು ಎರಡು ಮೊಬೈಲ್‍ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »