ಜೂ.26ರಿಂದ 30ರವರೆಗೆ ಮೈಸೂರು, ಚಾ.ನಗರದಲ್ಲಿ ತುಂತುರು, ಕೊಡಗು, ಮಂಡ್ಯ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ
ಮೈಸೂರು

ಜೂ.26ರಿಂದ 30ರವರೆಗೆ ಮೈಸೂರು, ಚಾ.ನಗರದಲ್ಲಿ ತುಂತುರು, ಕೊಡಗು, ಮಂಡ್ಯ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ

June 26, 2019

ಮೈಸೂರು,ಜೂ.25(ಆರ್‍ಕೆಬಿ)-ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಜೂ.26ರಿಂದ 30ರವರೆಗೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ತುಂತುರು ಹಾಗೂ ಕೆಲವು ಜಿಲ್ಲೆಗಳಲ್ಲಿ ತುಂತುರು ವಿನಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮೈಸೂರಿನ ನಾಗನಹಳ್ಳಿ ಕೃಷಿ ಹವಾಮಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ತುಂತುರು ಮಳೆ, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ, ಮಂಡ್ಯ ಜಿಲ್ಲೆಯಲ್ಲಿ ತುಂತುರುವಿನಿಂದ ಸಾಧಾರಣ ಮಳೆ ಬೀಳಬಹು ದಾಗಿದೆ. ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ 31-32 ಡಿಗ್ರಿ ಸೆಲ್ಸಿ ಯಸ್, ಕನಿಷ್ಠ ತಾಪಮಾನ 21-23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಬೆಳಗಿನ ಗಾಳಿಯ ತೇವಾಂಶ ಶೇ.80ರವರೆಗೆ ಹಾಗೂ ಮಧ್ಯಾಹ್ನದ ಗಾಳಿಯ ತೇವಾಂಶ ಶೇ.60ರಷ್ಟಿರುತ್ತದೆ. ಗಂಟೆಗೆ 3ರಿಂದ 4 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಅಂದಾಜಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ 23ರಿಂದ 24 ಡಿಗ್ರಿ ಸೆಲ್ಸಿಯಸ್, ಕನಿಷ್ಟ ತಾಪಮಾನ 17-18 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಬೆಳ ಗಿನ ಮತ್ತು ಮಧ್ಯಾಹ್ನದ ಗಾಳಿಯ ತೇವಾಂಶ ಶೇ.85 ರಷ್ಟು ಇರಲಿದೆ. ಗಂಟೆಗೆ 4ರಿಂದ 5 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ 33ರಿಂದ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21ರಿಂದ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ. ಬೆಳಗಿನ ಗಾಳಿಯ ತೇವಾಂಶ ಶೇ.70ರಷ್ಟು ಹಾಗೂ ಮಧ್ಯಾ ಹ್ನದ ಗಾಳಿಯ ತೇವಾಂಶ ಶೇ.60ರಿಂದ 65ರಷ್ಟಿರುತ್ತದೆ. ಗಂಟೆಗೆ 10ರಿಂದ 12 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ತಾಪಮಾನ 32ರಿಂದ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21-24 ಡಿಗ್ರಿ ಸೆಲ್ಸಿಯಸ್, ಬೆಳಗಿನ ಗಾಳಿಯ ತೇವಾಂಶ ಶೇ.82ರಿಂದ 85, ಮಧ್ಯಾಹ್ನದ ಗಾಳಿಯ ತೇವಾಂಶ ಶೇ.42ರಿಂದ 53ರಷ್ಟಿರುತ್ತದೆ. ಗಂಟೆಗೆ 5 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಚಟುವಟಿಕೆ:ಕೃಷಿ ಚಟುವಟಿಕೆಗಳಿಗೆ ರೈತರು ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ನಾಗನಹಳ್ಳಿ ಹವಾಮಾನ ಸೇವಾ ವಿಭಾಗದ ಅಧಿಕಾರಿಗಳು ರೈತರಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

ಮಳೆ ಬಂದಿರುವ ಕಡೆ ರೈತರು ಇಳಿಜಾರಿಗೆ ಅಡ್ಡ ಲಾಗಿ ಮಾಗಿ ಉಳುಮೆ ಮಾಡಬೇಕು. ಇದರಿಂದ ನೀರು ಇಂಗುವಿಕೆ ಹೆಚ್ಚಾಗುತ್ತದೆ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ಮುಂಗಾರು ಹಂಗಾಮಿನ ಬಿತ್ತನೆಗೆ ಪ್ರಮಾಣೀಕರಿಸಿದ ಬಿತ್ತನೆ ಬೀಜವನ್ನು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದು, ಬಿತ್ತನೆ ಕಾರ್ಯ ಕೈಗೊಳ್ಳಬಹುದು. ಬಿತ್ತನೆ ಮಾಡುವಾಗ ಏಕದಳ ಧಾನ್ಯದ ಬೀಜಗಳಿಗೆ ಅಝೋಸ್ಪಿರಿಲಮ್ ಮತ್ತು ಪಿಎಸ್‍ಬಿ ಹಾಗೂ ದ್ವಿದಳ ದಾನ್ಯದ ಬೀಜಗಳಿಗೆ ರೈಝೋಟಿಯಮ್ ಮತ್ತು ಪಿಎಸ್‍ಬಿಯಿಂದ ಉಪಚಾರ ಮಾಡಿ ಬಿತ್ತಬೇಕು.

ಉತ್ತಮ ಮಳೆ ಅವಕಾಶ ಇರುವುದರಿಂದ ಬದುಗಳ ಸುತ್ತಲೂ ಮೇವಿನ ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಿ ಇದರಿಂದ ಬದುಗಳು ಭದ್ರವಾಗಿರುತ್ತವೆ. ಜಮೀನುಗಳಲ್ಲಿ ನೀರಿನ ತೇವಾಂಶವನ್ನು ಕಾಪಾಡುತ್ತದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ: 9449869914 ಅಥವಾ 0821-2591267 ಸಂಪರ್ಕಿಸಬಹುದು.

Translate »