ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಜ್ಜು: ಇಂದು ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕರೆ
ಕೊಡಗು

ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಜ್ಜು: ಇಂದು ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕರೆ

November 10, 2018

ಮಡಿಕೇರಿ: ವ್ಯಾಪಕ ವಿರೋಧದ ನಡುವೆಯೂ ರಾಜ್ಯ ಸರಕಾರದ ಆದೇಶದಂತೆ ನಾಳೆ (ಶನಿವಾರ) ಕೊಡಗು ಜಿಲ್ಲೆಯ 3 ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿವೆ.

ಮಡಿಕೇರಿಯ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಮುಂಜಾಗೃತಾ ಕ್ರಮವಾಗಿ ಕೋಟೆ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಯಂತಿ ವಿರೋಧಿಸಿ ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕರೆ ನೀಡಿದ್ದು ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘ ಕೂಡ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯ ವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಜಿಲ್ಲೆಯ ಗಡಿ ಭಾಗ ಸೇರಿದಂತೆ ನಗರ ಪ್ರವೇಶಿಸುವ ರಸ್ತೆಗಳಲ್ಲಿ ನಾಕಾಬಂಧಿ ವಿಧಿಸಿ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಮಾತ್ರವಲ್ಲದೆ 1500ಕ್ಕೂ ಹೆಚ್ಚಿನ ಅಧಿಕಾರಿಗಳು ಮತ್ತು ಪೊಲೀಸರನ್ನು ಭದ್ರತಾ ಕಾರ್ಯಕ್ಕಾಗಿ ಜಿಲ್ಲೆಯ ಎಲ್ಲೆಡೆ ನಿಯೋಜಿಸಲಾಗಿದೆ.

ಪೊಲೀಸ್ ಪಥ ಸಂಚಲನ: ಟಿಪ್ಪು ಜಯಂತಿ ಆಚರಣೆ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡುವ ಮತ್ತು ಜನತೆಗೆ ಅಭಯ ನೀಡುವ ಸಲುವಾಗಿ ಆರ್‍ಎಎಫ್, ಕೆಎಸ್ ಆರ್‍ಪಿ ಮತ್ತು ಜಿಲ್ಲಾ ಪೊಲೀಸರು ಜಂಟಿ ಯಾಗಿ ನಗರದಲ್ಲಿ ಪಥ ಸಂಚಲನ ನಡೆಸಿದರು. ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ನೇತೃತ್ವದಲ್ಲಿ ಕಾನ್ವೆಂಟ್ ಜಂಕ್ಷನ್, ಐ.ಜಿ. ವೃತ್ತ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಪೊಲೀಸ್ ತುಕಡಿಗಳು, ಸಾರ್ವಜನಿಕ ಶಾಂತಿಗೆ ಭಂಗ ತರದಂತೆ ಎಚ್ಚರಿಕೆಯ ಸಂದೇಶ ಸಾರಿದವು.

ಟಿಪ್ಪು ಜಯಂತಿ ಆಚರಣೆಗೆ ನಗರದ ಕೋಟೆ ಹಳೇ ವಿಧಾನ ಸಭಾಂಗಣವನ್ನು ಸಿದ್ಧಪಡಿಸಲಾಗಿದೆ. ದುರಸ್ತಿ ಮತ್ತು ತೆರೆದ ಸ್ಥಿತಿಯಲ್ಲಿದ್ದ ಕಿಟಕಿಗಳನ್ನು ಹಲಗೆಯಿಂದ ಮುಚ್ಚಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ವಿತರಿಸಲಾಗಿದೆ. ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಶಾಸಕರುಗಳಾದ ಅಪ್ಪಚ್ಚು ರಂಜನ್. ಕೆ.ಜಿ. ಬೋಪಯ್ಯ, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಬೋಜೇಗೌಡ, ಆಯ ನೂರು ಮಂಜುನಾಥ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರುಗಳ ಹೆಸರುಗಳನ್ನು ಮುದ್ರಿಸಲಾಗಿದೆ.

ಬಿಜೆಪಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಬಿಜೆಪಿಯ ಜನಪ್ರತಿನಿಧಿಗಳು ಕಾರ್ಯಕ್ರಮ ಬಹಿ ಷ್ಕರಿಸುವ ಎಲ್ಲಾ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪರ-ವಿರೋಧದ ಅಭಿಪ್ರಾಯಗಳ ನಡುವೆ ಟಿಪ್ಪು ಜಯಂತಿ ಬೂದಿ ಮುಚ್ಚಿದ ಕೆಂಡ ದಂತೆ ಕಂಡು ಬರುತ್ತಿದೆ.

ಕೊಡಗಿನಾದ್ಯಂತ ಪೊಲೀಸರ ಹೈಅಲರ್ಟ್

ಸೋಮವಾರಪೇಟೆ: ನವಂಬರ್ 10ರಂದು ಟಿಪ್ಪು ಜಯಂತಿ ಆಚರಣೆ ಹಿನ್ನ ಲೆಯಲ್ಲಿ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಪಥ ಸಂಚಲನ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಕಕ್ಕೆಹೊಳೆ ಜಂಕ್ಷನ್ ಸಮೀಪದಿಂದ ಮಡಿಕೇರಿ ರಸ್ತೆ ಮಾರ್ಗದಲ್ಲಿ ತೆರಳಿ ಜೇಸಿ ವೇದಿಕೆಯವರೆಗೆ ಸುಮಾರು 200ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು ಸರ್ಕಲ್ ಇನ್ಸ್ ಪೆಕ್ಟರ್ ನಂಜುಂಡೇಗೌಡ ನೇತೃತ್ವದಲ್ಲಿ ಪಥ ಸಂಚಲನ ನಡೆಸಿದರು.

ಐಜಿಪಿ ಭೇಟಿ: ಪಟ್ಟಣದ ಠಾಣೆಗೆ ಐಜಿಪಿ ಕೆ.ವಿ.ಶರತ್‍ಚಂದ್ರ ಭೇಟಿ ನೀಡಿ ಭದ್ರತೆಯ ಬಗ್ಗೆ ತಹಸೀಲ್ದಾರ್ ಮಹೇಶ್ ಅವರೊಂದಿಗೆ ಚರ್ಚಿಸಿದರು. ಹಜರತ್ ಟಿಪ್ಪು ಸುಲ್ತಾನ್ ಜಯಂತಿಯ ದಿನದಂದು ಸೂಕ್ತ ಬಂದೋಬಸ್ತ್ ಕಲ್ಪಿಸುವ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕುಶಾಲನಗರ ವರದಿ: ಪಟ್ಟಣದಲ್ಲಿ ಟಿಪ್ಪು ಜಯಂತಿ ಆಚರಣೆ ಅಂಗವಾಗಿ ಶುಕ್ರ ವಾರ ಜಿಲ್ಲಾ ಪೊಲೀಸ್ , ಕೇಂದ್ರೀಯ ಮೀಸಲು ಪಡೆ ಹಾಗೂ ಪೊಲೀಸ್ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಕುಶಾಲನಗರದಲ್ಲಿ ಪಥ ಸಂಚಲನ ನಡೆಸಿದರು.

ಪಟ್ಟಣದ ನಾಗರಿಕರೇ ಹೆದರದಿರಿ ನಾವಿ ದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂಬ ಧೈರ್ಯ ಮೂಡಿಸುವ ಜೊತೆಗೆ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ಸಂದೇಶ ನೀಡಿದರು. ಕುಶಾಲನಗರಕ್ಕೆ ಆಗಮಿಸಿ ರುವ ಕೇಂದ್ರೀಯ ಮೀಸಲು ಪಡೆ ಯೋಧರು, ಪಟ್ಟಣದ ಪ್ರಮುಖ ಬಿಎಂ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪಥ ಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ನಗರ ಪೊಲೀಸ್ ಠಾಣೆಯ ಗಸ್ತು ವಾಹನದ ಮಾರ್ಗದರ್ಶನದಲ್ಲಿ ಮೀಸಲು ಪಡೆಯ ಯೋಧರು ಬಂದೂಕು ಹಿಡಿದು ಹಿಂಬಾಲಿಸಿದರು.

ಮೊಳಗಿದ ಸೈರನ್: ಮೀಸಲು ಪಡೆಯ ಪಥ ಸಂಚಲನ ವೇಳೆ ಸೈರನ್ ಮೊಳಗಿತು. ಈ ವೇಳೆ ಮನೆಯೊಳಗಿದ್ದ ಜನರು ಹೊರಗೆ ಬಂದು ಯೋಧರ ಪಥ ಸಂಚಲನವನ್ನು ವೀಕ್ಷಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮುರುಳೀಧರ್, ವೃತ್ತ ನಿರೀಕ್ಷಕ ಕ್ಯಾತೇಗೌಡ ನೇತೃತ್ವದಲ್ಲಿ ಠಾಣಾಧಿಕಾರಿ ಗಳಾದ ಜಗದೀಶ್, ನವೀನ್‍ಗೌಡ ಹಾಗೂ ಪೊಲೀಸ್ ಸಿಬ್ಬಂದಿಗಳು ಮೀಸಲು ಪಡೆ ಯೊಂದಿಗೆ ನೂರಾರು ಮಂದಿ ಪೊಲೀಸರು ಪಥ ಸಂಚಲನದಲ್ಲಿ ಪಾಲ್ಗೊಂಡು ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.

Translate »