ಮಹಾನ್ ಪರಾಕ್ರಮಿ ಟಿಪ್ಪು ಸುಲ್ತಾನ್
ಮೈಸೂರು

ಮಹಾನ್ ಪರಾಕ್ರಮಿ ಟಿಪ್ಪು ಸುಲ್ತಾನ್

September 1, 2019

ಮೈಸೂರು, ಆ.31(ಪಿಎಂ)- ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಗೆ ಪ್ರಬಲ ಪೆಟ್ಟು ನೀಡಿದ ಮಹಾನ್ ಪರಾಕ್ರಮಿ ಟಿಪ್ಪು ಸುಲ್ತಾನ್. ಇಂತಹ ಮೇರು ವ್ಯಕ್ತಿತ್ವದ ಟಿಪ್ಪು ಜಯಂತಿ ಯನ್ನು ಸರ್ಕಾರ ರದ್ದುಗೊಳಿಸಿತು ಎಂದು ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾ ನಿಲಯಗಳ ವಿಶ್ರಾಂತ ಕುಲಪತಿ ಪ್ರೊ.ಬಿ.ಶೇಖ್ ಅಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿವಿಯ ಇತಿಹಾಸ ಅಧ್ಯಯನ ವಿಭಾಗ ಮತ್ತು ಟಿಪ್ಪು ಸುಲ್ತಾನ್ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿಭಾಗದ ಸಭಾಂಗಣದಲ್ಲಿ `ಪೂರ್ವ ವಸಾಹತುಶಾಹಿ ಕರ್ನಾಟಕ ಇತಿಹಾಸದ ಮರು ಪರಿಶೀಲನೆ; ಟಿಪ್ಪು ಯುಗದ ಪ್ರಾಮುಖ್ಯತೆ’ ಕುರಿತಂತೆ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸಿ, ಗೌರವಿಸಬೇಕು. ಆದರೆ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.

ಟಿಪ್ಪು 18ನೇ ಶತಮಾನ ಕಂಡ ದಕ್ಷ ಆಡಳಿತಗಾರ. ಬ್ರಿಟಿಷರ ವಿರುದ್ಧ ದೀರ್ಘಾವಧಿ ಹೋರಾಟ ನಡೆಸಿದ ಟಿಪ್ಪು, ಇಡೀ ದೇಶದಲ್ಲಿಯೇ ಆ ಕಾಲದ ಮಹತ್ವಾಕಾಂಕ್ಷೆಯುಳ್ಳ ಆಡಳಿತಗಾರನಾಗಿದ್ದ. ಸಾಮಾಜಿಕ ಮತ್ತು ಸಾಂಸ್ಕøತಿಕ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದ್ದ. ರೇಷ್ಮೆ ಕೃಷಿ, ಕಾಗದ ಮುದ್ರಣ, ಕೃಷಿ ಬೆಳವಣಿಗೆಗೆ ಒತ್ತು ನೀಡಿದ್ದ. ಟಿಪ್ಪುವಿಗೆ ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಹಾಗೂ ಗೌರವ ನೀಡಬೇಕು. ಆದರೆ ಈ ಮೇರು ವ್ಯಕ್ತಿತ್ವಕ್ಕೆ ಸಲ್ಲಬೇಕಾದ ಶ್ರೇಯಸ್ಸು ಸಲ್ಲುತ್ತಿಲ್ಲ ಎಂದು ವಿಷಾದಿಸಿದರು.

ನಮ್ಮ ಮೂಲ ಬೇರು ಇತಿಹಾಸ. ಹೆಚ್ಚು ತಿಳಿದುಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸ ಬೇಕು. ಟಿಪ್ಪು ವಿವಾದಾತ್ಮಕ ವ್ಯಕ್ತಿಯನ್ನಾಗಿ ಮಾಡಲಾಗುತ್ತಿದೆ. 17 ವರ್ಷಗಳ ಕಾಲ ಆಡಳಿತ ನಡೆಸಿದ ಟಿಪ್ಪು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ಟಿಪ್ಪುವನ್ನು ಮತಾಂಧ ಎನ್ನುವ ಮಾತು ಸರಿಯಲ್ಲ. ಆತ 150ಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿಗೆ ಅನುದಾನ ನೀಡಿದ್ದು, ಆತ ಧರ್ಮ ಸಹಿಷ್ಣು ಎಂದರು. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಕ್ರಮ ನಡೆಯುತ್ತಿದ್ದ ಇತಿಹಾಸ ವಿಭಾಗದ ಸಭಾಂಗಣಕ್ಕೆ ಪೆÇಲೀಸ್ ಭದ್ರತೆ ಒದಗಿಸಲಾಗಿತ್ತು. ಮೈಸೂರು ವಿವಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸೆಬಾಸ್ಟಿಯನ್ ಜೋಸೆಫ್ ಭಾಷಣ ಮಾಡಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ವೈ.ಹೆಚ್.ನಾಯಕ್ವಾಡಿ ಮತ್ತಿತರರು ಹಾಜರಿದ್ದರು.

Translate »