ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮೈಸೂರಲ್ಲಿ ಇಂದು ಬೃಹತ್ ಸಾಮೂಹಿಕ ಯೋಗ ಪ್ರದರ್ಶನ
ಮೈಸೂರು

ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮೈಸೂರಲ್ಲಿ ಇಂದು ಬೃಹತ್ ಸಾಮೂಹಿಕ ಯೋಗ ಪ್ರದರ್ಶನ

June 21, 2018
  •  ಬೆಳಿಗ್ಗೆ 6 ರಿಂದ ಮೈಸೂರಿನ ರೇಸ್ ಕೋರ್ಸ್‍ನಲ್ಲಿ ಲಕ್ಷ ಯೋಗಪಟುಗಳ ಸಮಾಗಮ
  • ಸಚಿವರು, ಶಾಸಕರು, ಸಮಾಜದ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ಸಾಧ್ಯತೆ
  • ಪ್ರದರ್ಶನದಲ್ಲಿ ವಿವಿಧ ಯೋಗ ಶಾಲೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಾಥ್

ಮೈಸೂರು: ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಂಸ್ಕೃತಿಕ ನಗರ ಮೈಸೂರು ಸಜ್ಜಾಗಿದ್ದು, ಇಲ್ಲಿನ ರೇಸ್‍ಕೋರ್ಸ್‍ನಲ್ಲಿ ನಡೆಯಲಿರುವ ಸಾಮೂಹಿಕ ಬೃಹತ್ ಯೋಗ ಪ್ರದರ್ಶನದಲ್ಲಿ ಲಕ್ಷ ಯೋಗಪಟು ಗಳು ಭಾಗವಹಿಸುವ ನಿರೀಕ್ಷೆಯಿದೆ. ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಎಸ್‍ಪಿವೈಎಸ್‍ಎಸ್, ಜಿಎಸ್‍ಎಸ್ ಯೋಗಿಕ್ ಫೌಂಡೇಶನ್, ಪತಂಜಲಿ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋಟ್ರ್ಸ್ ಫೌಂಡೇಷನ್ ಹಾಗೂ ವಿವಿಧ ಯೋಗ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ನಾಲ್ಕನೇ ಅಂತರರಾಷ್ಟ್ರೀಯ ಯೋಗ ಪ್ರದರ್ಶನಕ್ಕೆ ರೇಸ್ ಕೋರ್ಸ್ ಮೈದಾನ ಸಜ್ಜುಗೊಂಡಿದೆ. ಗುರುವಾರ (ಜೂ.21) ಬೆಳಿಗ್ಗೆ 6ರಿಂದ 8ಗಂಟೆಯ ವರೆಗೆ ಯೋಗ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ರೇಸ್‍ಕೋರ್ಸ್‍ನಲ್ಲಿ ಗಣ್ಯರಿ ಗಾಗಿ ಬೃಹತ್ ವೇದಿಕೆ ಜೊತೆಗೆ ಯೋಗಪಟು ಗಳಿಗೆ ಮಾರ್ಗದರ್ಶನ ನೀಡಲು ಸುಮಾರು 70 ಸಣ್ಣ ಸಣ್ಣ ವೇದಿಕೆಗಳನ್ನು ಅಣಿಗೊಳಿಸಲಾಗಿದೆ. ಅಲ್ಲದೆ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಯೋಗಪಟುಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಲು ಧ್ವನಿ ವರ್ಧಕದ ವ್ಯವಸ್ಥೆ ಹಾಗೂ ಮುಂಜಾನೆ ಯಿಂದಲೇ ಯೋಗಪಟುಗಳು ಆಗಮಿ ಸುವ ಹಿನ್ನೆಲೆಯಲ್ಲಿ ವಿದ್ಯುತ್ ದೀಪಗಳನ್ನು ಎಲ್ಲೆಡೆ ಅಳವಡಿಸಲಾಗಿದೆ.

ಆರಕ್ಕೆ ಆರಂಭ: ನಾಳೆ ಬೆಳಿಗ್ಗೆ 6ಕ್ಕೆ ಯೋಗ ಪ್ರದರ್ಶನ ಆರಂಭವಾಗಲಿದೆ. ಪ್ರಾರ್ಥನೆಯೊಂದಿಗೆ ಆರಂಭವಾಗುವ ಯೋಗ ಪ್ರದರ್ಶನದಲ್ಲಿ ಯೋಗ ಶಿಷ್ಟಾಚಾರ ದಂತೆ 17 ಬಗೆಯ ಯೋಗ ಪ್ರದರ್ಶಿಸ ಲಾಗುವುದು. ಬಳಿಕ 25 ನಿಮಿಷಗಳ ಕಾಲ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮ ದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂ ಖಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ ಸೇರಿದಂತೆ ಇನ್ನಿತರ 19 ಆಸನಗಳನ್ನು ಪ್ರದರ್ಶನವಿದೆ. ನಂತರ 14 ನಿಮಿಷಗಳ ಕಾಲ ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ, ಶೀಥಲೀ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ಮೂಲಕ ಬೆಳಿಗ್ಗೆ 8ಕ್ಕೆ ಯೋಗ ಪ್ರದರ್ಶನ ಅಂತ್ಯಗೊಳ್ಳಲಿದೆ.

ಪಾಲ್ಗೊಳ್ಳುವ ಗಣ್ಯರು: ಯೋಗ ಪ್ರದರ್ಶನದಲ್ಲಿ ಸಚಿವರುಗಳಾದ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಉಪವಿಭಾಗಾಧಿಕಾರಿ ಹೆಚ್.ಎನ್.ಶಿವೇಗೌಡ, ಆಯೂಷ್ ಇಲಾಖೆಯ ನಿರ್ದೇಶಕಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು, ನೆಹರು ಯುವ ಕೇಂದ್ರದ ಸಂಯೋಜಕ ಎಂ.ಎನ್.ನಟರಾಜ್, ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಹೆಚ್.ಪಿ.ಮಂಜುನಾಥ್, ಕಾಡ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಕುಮಾರ್, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಕಾರ್ಯದರ್ಶಿ ಎ.ಸಿ.ರವಿ, ಎಸ್‍ಪಿವೈಎಸ್ ಮುಖ್ಯಸ್ಥ ಡಾ.ಮಾರುತಿ, ಜಿಎಸ್‍ಎಸ್ ಯೋಗಿಕ್ ಶ್ರೀಹರಿ, ರಂಗನಾಥ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಮೈಸೂರು ಯೋಗ ಒಕ್ಕೂಟದ ಬಿ.ಪಿ.ಮೂರ್ತಿ, ಶಾಂತರಾಮು, ಮೈಸೂರು ಯೋಗ ಸ್ಪೋಟ್ರ್ಸ್ ಕ್ಲಬ್‍ನ ಮುಖ್ಯಸ್ಥರು ಡಾ.ಗಣೇಶ್ ಕುಮಾರ್, ಪತಂಜಲಿಯ ಸಂಸ್ಥೆಯ ರತ್ನರಾವ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ಸಾರಿಗೆ ಬಸ್ ವ್ಯವಸ್ಥೆ: ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ನಗರದ ವಿವಿಧ ಬಡಾವಣೆಗಳಿಂದ ಬಸ್ ವ್ಯವಸ್ಥೆಯನ್ನು ಮುಂಜಾನೆಯಿಂದಲೇ ಮಾಡಿದೆ. ಕುವೆಂಪುನಗರ, ರಾಮಕೃಷ್ಣನಗರ, ವಿಜಯನಗರ, ವಿವೇಕಾನಂದ ನಗರ, ಶ್ರೀರಾಂಪುರ, ಬೋಗಾದಿ, ಹೆಬ್ಬಾಳು ಸೇರಿದಂತೆ ವಿವಿಧ ಬಡಾವಣೆಗಳಿಂದ ಸಾರಿಗೆ ಸಂಸ್ಥೆಯ ಬಸ್‍ಗಳು ಮುಂಜಾನೆ 5 ಗಂಟೆಯಿಂದಲೇ ರೇಸ್‍ಕೋರ್ಸ್‍ನತ್ತ ಪ್ರಯಾಣ ಬೆಳೆಸಲಿವೆ.

ಯೋಗ ಪ್ರದರ್ಶನಕ್ಕೆ ಭಾರೀ ಬಂದೋಬಸ್ತ್, ಕಟ್ಟೆಚ್ಚರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರೇಸ್ ಕೋರ್ಸ್ ಮೈದಾನದಲ್ಲಿ ಗುರುವಾರ ನಡೆಯಲ್ಲಿರುವ ಬೃಹತ್ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮಕ್ಕೆ ಭಾರೀ ಭದ್ರತೆ ಮಾಡಲಾಗಿದೆ. ಯೋಗ ಪ್ರದರ್ಶನಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಪ್ರತೀ ಪ್ರವೇಶ ಗೇಟ್‍ಗಳಲ್ಲಿ ಮೆಟಲ್ ಡೋರ್ ಡಿಟೆÉಕ್ಟರ್ ಅಳವಡಿಸಿ ತೀವ್ರ ತಪಾಸಣೆ ಮಾಡಲಾಗುವುದು ಎಂದು ಡಿಸಿಪಿವಿ ವಿಷ್ಣುವರ್ಧನ್ ತಿಳಿಸಿದ್ದಾರೆ. ಯೋಗ ಪ್ರದರ್ಶನ ನಡೆಯುವ ರೇಸ್ ಕೋರ್ಸ್ ಮೈದಾನದಲ್ಲಿ ಇಂದು ಆಂಟಿ ಸಬಾಟಿಕೆ ಚೆಕ್ ಟೀಂ(ಎಎಸ್‍ಸಿಟಿ) ಹಾಗೂ ಶ್ವಾನ ದಳದ ಸಿಬ್ಬಂದಿ ಮೊದಲ ಹಂತದ ತಪಾಸಣೆ ನಡೆಸಿದ್ದು, ಗುರುವಾರ ಮುಂಜಾನೆಯೂ ತೀವ್ರ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

ಯಾವುದೆ ಭಯಬೇಡ..

ರೇಸ್‍ಕೋರ್ಸ್‍ನಲ್ಲಿ ನಾಳೆ ನಡೆಯಲಿರುವ ಯೋಗ ಪ್ರದರ್ಶನಕ್ಕೆ ಜಿಲ್ಲಾಡಳಿತ ದೊಂದಿಗೆ ಹಲವು ಸಂಘ-ಸಂಸ್ಥೆಗಳು ಕೈ ಜೋಡಿಸಲಿವೆ. ಇಂದು ರೇಸ್‍ಕೋರ್ಸ್ ಮೈದಾನದಲ್ಲಿ ಎಲ್ಲೆಡೆ ತಪಾಸಣೆ ನಡೆಸಲಾಗಿದೆ. ಯೋಗಪಟುಗಳು ಯಾವುದೇ ಆತಂಕವಿಲ್ಲದೆ ಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಲ್ಲದೆ ಯೋಗಪಟುಗಳ ಮೈದಾನ ಪ್ರವೇಶಕ್ಕಾಗಿ ತೆರೆದಿರುವ 6 ಗೇಟ್‍ಗಳಲ್ಲಿಯೂ ಸ್ವಯಂ ಸೇವಕರನ್ನು ನಿಯೋಜಿಸಿದ್ದು, ಅವರು ಯೋಗಪಟುಗಳಿಗೆ ನೆರವು ನೀಡಲಿದ್ದಾರೆ. -ಬಿ.ಎಸ್.ಪ್ರಶಾಂತ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ

Translate »