ನಾಳೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ
ಮೈಸೂರು

ನಾಳೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ

October 12, 2019

ಮೈಸೂರು, ಅ.11(ಆರ್‍ಕೆಬಿ)- ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅ.13ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಕಲಾಮಂದಿರದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಲಾಗು ವುದು ಎಂದು ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಮುಖಂಡ ಕ್ಯಾತಮಾರನಹಳ್ಳಿ ವೆಂಕಟೇಶ್ ತಿಳಿಸಿದರು.

ಮೈಸೂರು ಜಿಲ್ಲಾಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮೆರವಣಿಗೆಯು ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಮೆಟ್ರೊಪೋಲ್ ವೃತ್ತ, ಹುಣಸೂರು ರಸ್ತೆ ಮೂಲಕ ಕಲಾಮಂದಿರ ತಲುಪಲಿದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಕಲಾಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡುವರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಸಂಸದರಾದ ಪ್ರತಾಪ ಸಿಂಹ, ವಿ.ಶ್ರೀನಿವಾಸಪ್ರಸಾದ್, ಸುಮಲತಾ ಅಂಬರೀಶ್ ಇನ್ನಿತರರು ಭಾಗವಹಿಸುವರು. ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಉಪ ಪ್ರಾಚಾರ್ಯ ಡಾ.ಬಿ.ವಿ.ಕರಡೋಣಿ ಮುಖ್ಯ ಭಾಷಣ ಮಾಡುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಉದ್ಬೂರು ಮಹದೇವಸ್ವಾಮಿ, ರಮ್ಮನಹಳ್ಳಿ ನಾಗರಾಜು, ಟೆನ್ನಿಸ್ ಗೋಪಿ, ವೀರನಗೆರೆ ದೇವರಾಜ್ ಇನ್ನಿತರರು ಉಪಸ್ಥಿತರಿದ್ದರು.

Translate »