ನಾಳೆ ತಲಕಾವೇರಿಯಲ್ಲಿ ತೀರ್ಥೋದ್ಭವ
ಕೊಡಗು

ನಾಳೆ ತಲಕಾವೇರಿಯಲ್ಲಿ ತೀರ್ಥೋದ್ಭವ

October 16, 2018

ಮಡಿಕೇರಿ:  ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅ.17ರ ಸಂಜೆ 6 ಗಂಟೆ 43 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿ ತೀರ್ಥ ರೂಪಿಣಿಯಾಗಿ ಆವೀರ್ಭವಿಸಲಿದ್ದಾಳೆ. ಇದಕ್ಕಾಗಿ ಜಿಲ್ಲಾಡಳಿತ ಮತ್ತು ಭಾಗಮಂಡಲ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಎಲ್ಲಾ ಅಗತ್ಯ ಸಿದ್ದತೆಯನ್ನು ಮಾಡಿಕೊಂಡಿದೆ. ಅ.17ರ ಮುಂಜಾನೆ ಯಿಂದಲೇ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರಲಿದೆ. ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಮತ್ತು ದೇವಸ್ಥಾನ ಸಮಿತಿ ಒಟ್ಟಾಗಿ ಕಾವೇರಿ ಜಾತ್ರೆಯನ್ನು ಯಶಸ್ಸುಗೊಳಿಸಲು ಸಜ್ಜಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಪವಿತ್ರ ಕಾವೇರಿ ತೀರ್ಥೋದ್ಬವಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆಗಳನ್ನು ಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಸಂಜೆ ವೇಳೆ ಪವಿತ್ರ ತೀರ್ಥೋ ದ್ಬವ ನೆರವೇರುವುದರಿಂದ ಗಣ್ಯರ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಭದ್ರತಾ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಾತ್ರವಲ್ಲದೆ, ಭಕ್ತರಿಗೂ ಭದ್ರತೆಯಿಂದ ಕಿರಿಕಿರಿಯಾಗದಂತೆ ತಡೆಯಲು ಜನ ಸ್ನೇಹಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ.

ತೀರ್ಥೋದ್ಬವದ ಸಂದರ್ಭ ಭಕ್ತರ ನೂಕು ನುಗ್ಗಲು ತಡೆಯಲು ತೀರ್ಥಕೊಳದ ಪ್ರವೇಶ ದ್ವಾರದ ಬಿಳಿ ಬ್ಯಾರಿಕೇಡ್‍ಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಅದರೊಂದಿಗೆ ಕೊಳದ ಸುತ್ತಲೂ ಬಿದಿರಿನ ತಾತ್ಕಾಲಿಕ ತಡೆಗೋಡೆಯನ್ನು ಕಟ್ಟಲಾಗುತ್ತಿದೆ. ದೇವಾಲಯದ ಆವರಣದಲ್ಲಿ ಹೆಚ್ಚು ವರಿಯಾಗಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗು ತ್ತಿದ್ದು, 3 ಬೃಹತ್ ಎಲ್‍ಇಡಿ ಪರದೆಯನ್ನು ತೀರ್ಥೋದ್ಬವ ವೀಕ್ಷಣೆಗೆಂದು ಅಳವಡಿಸಲಾಗುತ್ತಿದೆ.

ಅ.17ರಂದು ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಮಾತ್ರ ತಲಕಾವೇರಿಗೆ ಭಕ್ತಾಧಿಗಳ ವಾಹನ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು ಆ ಬಳಿಕ ಬರುವ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ ಯಾತ್ರಾರ್ಥಿಗಳು ತೆರಳಲು ಅನುಕೂಲವಾಗು ವಂತೆ ಕೆಎಸ್‍ಆರ್‍ಟಿಸಿ ಬಸ್‍ಗಳ ವ್ಯವಸ್ಥೆ ಮಾಡ ಲಾಗಿದ್ದು ಭಕ್ತಾಧಿಗಳು ಸಹಕರಿಸುವಂತೆ ಭಾಗ ಮಂಡಲ ತಲಕಾವೇರಿ ದೇವಾಲಯ ವ್ಯವಸ್ಥಾಪನ ಸಮಿತಿ ಹಾಗೂ ಜಿಲ್ಲಾಡಳಿತ ಮನವಿ ಮಾಡಿದೆ.

ಏಕಮುಖ ಸಂಚಾರ: ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಅಕ್ಟೋಬರ್, 17 ರಂದು ನಡೆಯಲಿರುವ ತುಲಾ ಸಂಕ್ರಮಣ ಜಾತ್ರೆ ಹಾಗೂ ಕಾವೇರಿ ತೀರ್ಥೋದ್ಭವ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಅಕ್ಟೋಬರ್, 17 ರಂದು ಬೆಳಗ್ಗೆ 10 ಗಂಟೆಯಿಂದ ಅದೇ ದಿನ ರಾತ್ರಿ 10 ಗಂಟೆಯವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಆರಕ್ಷಕ ಅದಿsೀಕ್ಷಕರು, ಕೊಡಗು ಜಿಲ್ಲಾ, ಮಡಿಕೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ಏಕಮುಖ ಸಂಚಾರ ವ್ಯವಸ್ಥೆ ಇಂತಿದೆ. ಮಡಿಕೇರಿ ಕಡೆಯಿಂದ ಭಾಗಮಂಡಲಕ್ಕೆ ಹೋಗುವ ಎಲ್ಲಾ ವಾಹನಗಳು ಮೇಕೇರಿ- ಉಡೋತ್‍ಮೊಟ್ಟೆ-ಅಪ್ಪಂಗಳ ಮಾರ್ಗವಾಗಿ ಭಾಗಮಂಡಲಕ್ಕೆ ಸಂಚರಿಸುವುದು. ಭಾಗಮಂಡಲದಿಂದ ಮಡಿಕೇರಿ ಹಾಗೂ ಮಂಗಳೂರು ಕಡೆಗೆ ಹೋಗುವ ವಾಹನಗಳು ಅಪ್ಪಂಗಳ-ಪನ್ಯ-ಕಾಟಕೇರಿ ಮಾರ್ಗವಾಗಿ ಸಂಚರಿಸುವುದು.

ಮದ್ಯ ಮಾರಾಟ ನಿಷೇಧ: ತಲಕಾವೇರಿಯಲ್ಲಿ ಅಕ್ಟೋಬರ್, 17 ರಂದು ನಡೆಯಲಿರುವ ಕಾವೇರಿ ತೀರ್ಥೋಧ್ಬವ/ ಜಾತ್ರಾ ಸಂಬಂಧ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಹಾಗೂ ಕಾರ್ಯಕ್ರಮವು ಶಾಂತಿಯುತವಾಗಿ ನಡೆಯಲು ಅನುವಾಗುವಂತೆ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ನನಗೆ ದತ್ತವಾಗಿರುವ ಅಧಿಕಾರದಂತೆ ಅಕ್ಟೋಬರ್, 16 ರ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್, 18 ರ ಮಧ್ಯರಾತ್ರಿ 12 ಗಂಟೆಯವರೆಗೆ ಭಾಗಮಂಡಲ ಠಾಣಾ ಸರಹದ್ದಿನ (ಭಾಗಮಂಡಲ ಮತ್ತು ಚೇರಂಬಾಣೆ ಸೇರಿದಂತೆ) 15 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿರುವ ಎಲ್ಲಾ ರೀತಿಯ ಅಂಗಡಿ, ಬಾರ್ ಹಾಗೂ ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

Translate »