ಧಾರಾಕಾರ ಮಳೆ: ಮೈಸೂರಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಮೈಸೂರು

ಧಾರಾಕಾರ ಮಳೆ: ಮೈಸೂರಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ

August 10, 2019

ಮೈಸೂರು,ಆ.9(ಆರ್‍ಕೆ)-ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈಸೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಕಬಿನಿ, ಹಾರಂಗಿ, ತಾರಕ ಹಾಗೂ ನುಗು ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಗಡೆ ಬಿಡುತ್ತಿ ರುವುದರಿಂದ ಪ್ರವಾಹ ಉಂಟಾಗಿದ್ದು, ಸಂಚಾರ ಮಾರ್ಗ ಕೆಲವೆಡೆ ಬಂದ್ ಆಗಿರುವು ದರಿಂದ ಮೈಸೂರು ನಗರದಲ್ಲಿ ಜನ ಸಂದಣಿ ವಿರಳವಾಗಿರುವುದು ಇಂದು ಕಂಡುಬಂದಿತು.

ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ, ಬಹುತೇಕ ಜನರು ಮನೆಯಿಂದ ಹೊರಬರಲಾಗುತ್ತಿಲ್ಲ. ಪರಿಣಾಮ ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿದೆಯಲ್ಲದೆ, ಸದಾ ಗಿಜಿಗುಡುತ್ತಿದ್ದ ದೇವರಾಜ ಮಾರು ಕಟ್ಟೆ, ಕೃಷ್ಣರಾಜ, ಮಂಡಿ ಮಾರುಕಟ್ಟೆಗಳು, ಬಂಡಿಪಾಳ್ಯ ಎಪಿಎಂಸಿ ಹಾಗೂ ಹಳೇ ಆರ್‍ಎಂಸಿ ಮಾರುಕಟ್ಟೆಗಳು ಇಂದು ಗ್ರಾಹಕರಿ ಲ್ಲದೆ ಭಣಗುಡುತ್ತಿದ್ದುದು ಕಂಡು ಬಂದಿತು.

ಮಳೆಯಿಂದಾಗಿ ಡಿ.ದೇವರಾಜ ಅರಸು ರಸ್ತೆ, ಸಂತೆಪೇಟೆ, ಶಿವರಾಂಪೇಟೆ, ಮಕ್ಕಾಜಿ ಚೌಕ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಕೆ.ಆರ್.ಸರ್ಕಲ್‍ನಂತಹ ಪ್ರಮುಖ ರಸ್ತೆಗಳು, ಸರ್ಕಲ್‍ಗಳ ವಾಣಿಜ್ಯ ವಹಿವಾಟುಗಳೂ ಸಹ ವಿರಳವಾಗಿದ್ದುದು ಸಾಮಾನ್ಯವಾಗಿತ್ತು.

ಶಾಲಾ-ಕಾಲೇಜು, ಸರ್ಕಾರಿ, ಖಾಸಗಿ ಸಂಸ್ಥೆ ಕಚೇರಿಗಳು, ಉದ್ದಿಮೆಗಳು, ಕಾರ್ಖಾನೆಗಳಲ್ಲೂ ಮಳೆ ಜತೆಗೆ ವರ ಮಹಾಲಕ್ಷ್ಮಿ ಹಬ್ಬವಿದ್ದುದರಿಂದ ಹಾಜ ರಾತಿ ತೀರಾ ಕಡಿಮೆ ಕಂಡು ಬಂದಿದ್ದು, ಇದರಿಂದಾಗಿ ಮೈಸೂರಿನ ರಸ್ತೆಗಳು ವಾಹನ ದಟ್ಟಣೆ ಇಲ್ಲದೇ ಬಿಕೋ ಎನ್ನುತ್ತಿದ್ದವು.

ಮೈಸೂರು ನಗರದಲ್ಲಿ ಸಂಚರಿಸುವ ನಗರ ಕೆಎಸ್‍ಆರ್‍ಟಿಸಿ ಬಸ್ಸುಗಳು, ಹೊರ ಊರುಗಳಿಗೆ ಹೋಗುವ ಸಾರಿಗೆ ಮತ್ತು ಖಾಸಗಿ ಬಸ್ಸುಗಳಲ್ಲೂ ಪ್ರಯಾಣಿಕರ ಸಂಖ್ಯೆಯು ವಿರಳವಾಗಿತ್ತು. ರೈಲು ಪ್ರಯಾಣಿಕರು, ಆಟೋ-ಟ್ಯಾಕ್ಸಿಗಳಲ್ಲಿ ಓಡಾಡುವವರು, ಪ್ರವಾಸಿಗರ ಚಲನ-ವಲನವೂ ವಿರಳವಾಗಿದ್ದರಿಂದ ಮೈಸೂ ರಿನಲ್ಲಿ ಒಂದು ರೀತಿಯ ವಾತಾವರಣ ಕಂಡು ಬಂದಿತು.

ಉಳಿದಂತೆ ಶೆಲ್ಟರ್ ಇಲ್ಲದೆ ರಸ್ತೆ ಬದಿ ಯಲ್ಲಿ ವ್ಯಾಪಾರ ಮಾಡುವ ಹಣ್ಣು-ತರಕಾರಿ, ವಸ್ತ್ರ, ಆಟಿಕೆ ಸಾಮಾನು ಮಾರುವ ಫುಟ್‍ಪಾತ್ ವ್ಯಾಪಾರಿಗಳಿಗೂ ಗ್ರಾಹಕರಿರಲಿಲ್ಲ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ತಿಂಡಿ-ಊಟ ಮಾರುವ ವರೂ ಮಳೆ ಕಾರಣಕ್ಕೆ ಬಹುತೇಕ ಅಂಗಡಿ ಗಳು ತೆರೆದಿರಲಿಲ್ಲ. ಪರಿಣಾಮ ಕೂಲಿ ಕಾರ್ಮಿಕರು, ಕಾರ್ಖಾನೆ, ಸಣ್ಣಪುಟ್ಟ ಉದ್ದಿಮೆಗಳಲ್ಲಿ ಕೆಲಸ ಮಾಡುವವರು, ಜನಸಾಮಾನ್ಯರುಗಳಿಗೆ ಊಟ-ತಿಂಡಿ ಸಿಗದೆ ಪರದಾಡುವಂತಾಗಿತ್ತು.

ಮೈಸೂರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್‍ಗಳು, ಖಾಸಗಿ ಹೋಟೆಲ್ ಗಳು, ಮಾಲ್‍ಗಳು, ವಾಣಿಜ್ಯ ಕೇಂದ್ರ ಗಳಲ್ಲೂ ಜನ ವಿರಳವಾಗಿದ್ದು, ಜನರು ಮಳೆಯಿಂದಾಗಿ ಹೊರ ಬರಲಾಗದ ಕಾರಣ ವ್ಯಾಪಾರಸ್ಥರಿಗೆ ವಹಿವಾಟು ಗಣನೀಯವಾಗಿ ಕುಸಿತ ಕಂಡಿದೆ.

Translate »