ಹಳ್ಳಕ್ಕೆ ಉರುಳಿದ ಟ್ರಾಕ್ಟರ್: ಮೂವರ ಸಾವು
ಮಂಡ್ಯ

ಹಳ್ಳಕ್ಕೆ ಉರುಳಿದ ಟ್ರಾಕ್ಟರ್: ಮೂವರ ಸಾವು

May 30, 2018

ಮಂಡ್ಯ: ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಶ್ರೀರಂಗ ಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದ ಬಳಿ ಇಂದು ನಡೆದಿದೆ.ಟ್ರಾಕ್ಟರ್ ಚಾಲಕ ಪ್ರಸನ್ನ, ದೊಡ್ಡಪಾಳ್ಯ ಗ್ರಾಮದ ನಾಥೇಗೌಡರ ಮಗ ಪ್ರವೀಣ್(32) ಮತ್ತು ಹಂಗರಹಳ್ಳಿ ಗ್ರಾಮದ ಮಟ್ಟಿಗೌಡರ ಪುತ್ರ ನಿಖಿಲ್(34) ಮೃತ ದುರ್ದೈವಿಗಳು.

ಘಟನೆ ಹಿನ್ನೆಲೆ: ಇಂದು ಮಧ್ಯಾಹ್ನ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಕ್ವಾರಿಯಿಂದ ಯಾಚೇನಹಳ್ಳಿ ಗ್ರಾಮಕ್ಕೆ ಕಲ್ಲುಗಳನ್ನು ತುಂಬಿಕೊಂಡು ಟ್ರಾಕ್ಟರ್ (ಕೆಎ 11, ಟಿ 7833) ಹೋಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ನೇರಳೆಕೆರೆ ಗ್ರಾಮದ ಮರಿಯಯ್ಯನ ಕೆರೆ ಏರಿಯ ತಿರುವಿನಲ್ಲಿ ಸೇತುವೆಗೆ ತಡೆ ಗೋಡೆ ಇಲ್ಲದ ಕಾರಣ ಆಯತಪ್ಪಿ ಟ್ರಾಕ್ಟರ್ 20 ಅಡಿ ಆಳದ ಹಳ್ಳಕ್ಕೆ ಮಗುಚಿ ಬಿದ್ದಿದೆ. ಪರಿಣಾಮ ಟ್ರಾಕ್ಟರ್ ಚಾಲಕ ಪ್ರಸನ್ನ, ಪ್ರವೀಣ್ ಹಾಗೂ ನಿಖಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿ: ನೇರಳೆಕೆರೆ ಗ್ರಾಮದ ಬಳಿ ಕೆರೆಯ ಏರಿಯ ರಸ್ತೆ ತುಂಬ ಕಿರಿದಾಗಿದ್ದು, ರಸ್ತೆಯನ್ನು ದುರಸ್ಥಿಗೊಳಿಸುವಂತೆ ಸ್ಥಳೀಯರು ಹಲವು ಬಾರಿ ಅಧಿಕಾರಿ ಗಳಿಗೆ ಮನವಿ ಮಾಡಿದ್ದರು. ಆದರೆ ಸ್ಥಳೀಯರ ಮನವಿಗೆ ಸ್ಪಂದಿಸದ ಅಧಿಕಾರಿಗಳು ರಸ್ತೆಯ ಕಾಮಗಾರಿಗೆ ಗಮನ ಹರಿಸಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೀಗ ಟ್ರಾಕ್ಟರ್ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಪಂ ಸದಸ್ಯರಾದ ಎನ್.ಪಿ.ಸುರೇಶ್ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

Translate »