`ನೀರು, ನೈರ್ಮಲ್ಯ, ಶುಚಿತ್ವ-ಆವಿಷ್ಕಾರಗಳ ಅಳವಡಿಕೆ’ ಕುರಿತ ತರಬೇತಿಗೆ ಚಾಲನೆ
ಮೈಸೂರು

`ನೀರು, ನೈರ್ಮಲ್ಯ, ಶುಚಿತ್ವ-ಆವಿಷ್ಕಾರಗಳ ಅಳವಡಿಕೆ’ ಕುರಿತ ತರಬೇತಿಗೆ ಚಾಲನೆ

May 17, 2019

ಮೈಸೂರು: ಎನ್‍ಐಇ ಮತ್ತು ಮೈಸೂರು ನಗರಪಾಲಿಕೆ ಜಂಟಿ ಆಶ್ರಯದಲ್ಲಿ ಮೈಸೂರಿನ ಮಾನಂದವಾಡಿ ರಸ್ತೆ ಎನ್‍ಐಇ ಕಾಲೇ ಜಿನ ಡಾ.ಸರ್ವಪಲ್ಲಿ ರಾಧಾಕೃಷ್ಣ ಸಭಾಂಗಣದಲ್ಲಿ `ನೀರು, ನೈರ್ಮಲ್ಯ, ಶುಚಿತ್ವ – ಆವಿಷ್ಕಾರಗಳ ಅಳವಡಿಕೆ’ ಬಗ್ಗೆ ಎರಡು ದಿನದ ತರಬೇತಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ದೊರೆಯಿತು.

ನಗರಪಾಲಿಕೆ ಮತ್ತು ಜಿಪಂನ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದ ಕಾರ್ಯಾ ಗಾರಕ್ಕೆ ಗಣ್ಯರು ಜಂಟಿಯಾಗಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಅವರು, ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು 5ನೇ ಸ್ಥಾನ ಪಡೆದಿರುವ ಮೈಸೂರು ನಗರದಲ್ಲಿ ನಗರ ಪಾಲಿಕೆಯು ಎನ್‍ಐಇ ಸಹಯೋಗದಲ್ಲಿ ಮಳೆ ನೀರಿನ ಕೊಯ್ಲು, ನೈರ್ಮಲ್ಯದ ವಿಚಾರಗಳಲ್ಲಿ ಹೆಚ್ಚು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ಮೈಸೂರು ವಾಣಿವಿಲಾಸ ನೀರು ಸರಬರಾಜು ಕೇಂದ್ರ ಸೂಪರಿಂಟೆಂಡಿಂಗ್ ಇಂಜಿನಿಯರ್ ಡಾ. ಹರೀಶ್ ಮಾತನಾಡಿ, ಈ ವರ್ಷದಿಂದ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲು ಚಿಂತಿಸಲಾಗಿದೆ. ಮೈಸೂರಿನ 1200 ಕೊಳವೆ ಬಾವಿಗಳ ಪೈಕಿ 300 ಬಾವಿಗಳು ಬತ್ತಿ ಹೋಗಿದ್ದು, ಅವುಗಳಿಗೆ ಮಳೆ ನೀರು ಕೊಯ್ಲು ಮೂಲಕ ಮರುಪೂರಣಗೊಳಿ ಸಲು ನಿರ್ಧರಿಸಲಾಗಿದೆ ಎಂದರು.

ಎನ್‍ಐಇ ಪ್ರಾಂಶುಪಾಲ ಡಾ.ಜಿ.ರವಿ ಮಾತ ನಾಡಿ, ನೀರಿನ ಮಿತವ್ಯಯದ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯ. ಇದಕ್ಕೆ ಸರಿಯಾದ ಮಾರ್ಗವೆಂದರೆ ಮಳೆ ನೀರಿನ ಕೊಯ್ಲು ಎಂದು ಹೇಳಿದರು. ಇದೇ ಅಭಿಪ್ರಾಯವನ್ನು ಎನ್‍ಐಇ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಜಿ.ಎಸ್.ರಾಮಚಂದ್ರ ಅವರೂ ವ್ಯಕ್ತಪಡಿಸಿದರು. ನಗರಪಾಲಿಕೆ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಹೇಶ್, ಎನ್‍ಐಇ ವಾಶ್ ಮುಖ್ಯಸ್ಥ ಎಸ್. ಶ್ಯಾಮ್‍ಸುಂದರ್ ಇತರರು ಉಪಸ್ಥಿತರಿದ್ದರು.

Translate »