ಮೈಸೂರು: ಹೆಚ್1 ಎನ್1 (ಹಂದಿಜ್ವರ) ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ತೀವ್ರವಾದ ಕೆಮ್ಮು, ಜ್ವರ, ಗಂಟಲು ನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಬಸವರಾಜು ಸಲಹೆ ನೀಡಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಇತರೆ ಸೋಂಕಿಗಿಂತ ಹೆಚ್1ಎನ್1(ಹಂದಿಜ್ವರ) ಸೋಂಕು ಭಿನ್ನವಲ್ಲ. ಈ ಸೋಂಕು ಪೀಡಿತ ರಿಗೂ ಚಿಕಿತ್ಸೆ ಇದೆ. ಸೋಂಕು ತಗುಲಿದ ವರೆಲ್ಲರೂ ಸಾವನ್ನಪ್ಪುತ್ತಾರೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಬಹುತೇಕ ಸೋಂಕಿತರು ಗುಣಮುಖರಾಗುತ್ತಾರೆ. ರೋಗ ನಿರೋ ಧಕ ಶಕ್ತಿಯ ಕೊರತೆ ಇದ್ದವರಿಗೆ, ವಿವಿಧ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದವರ ಮೇಲೆ ಹೆಚ್1ಎನ್1 ಸೋಂಕು ಪರಿಣಾಮ ಬೀರುವ ಸಾಧ್ಯತೆಯಿದೆ. ಅದನ್ನು ಹೊರತುಪಡಿಸಿ ದರೆ ಆರೋಗ್ಯವಂತರಾಗಿರುವವರಿಗೆ ಸೋಂಕು ಕಾಣಿಸಿಕೊಂಡರೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದರು.
ಹೆಚ್1ಎನ್1 ಸೋಂಕು ಬಾರದಂತೆ ತಡೆಗಟ್ಟಬಹುದು. ಅತಿಯಾದ ಕೆಮ್ಮು, ಜ್ವರ, ಶೀತ, ಗಂಟಲು ನೋವು, ವಾಂತಿ, ಭೇದಿ, ಉಸಿರಾಟದ ತೊಂದರೆ, ಮೈ,ಕೈ ನೋವು ಕಾಣಿಸಿಕೊಂಡರೆ, ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಕೆಮ್ಮು, ಸೀನು ಬಂದಾಗ ಬಾಯಿಗೆ ಕರವಸ್ತ್ರ ಅಥವಾ ತೋಳನ್ನು ಅಡ್ಡವಾಗಿಟ್ಟುಕೊಳ್ಳ ಬೇಕು. ಇದರಿಂದ ಸೋಂಕು ಇತರರಿಗೆ ಹರ ಡುವುದಿಲ್ಲ. ಸೋಂಕು ತಗುಲಿರುವುದು ಗೊತ್ತಾದರೆ ಪೌಷ್ಟಿಕ ಆಹಾರ ಸೇವಿಸಿ, ಶುದ್ಧ ನೀರು ಕುಡಿಯಬೇಕು. ಜನನಿಬಿಡ ಪ್ರದೇಶಗಳಿಗೆ ತೆರಳಬಾರದು. ಒಂದೆಡೆ ಯಿಂದ ಮತ್ತೊಂದೆಡೆಗೆ ಪ್ರಯಾಣಿಸದೆ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳ ಬೇಕು. ಯಾರಿಗೂ ಹಸ್ತಲಾಘವ ಮಾಡ ಬಾರದು ಎಂದು ಸಲಹೆ ನೀಡಿದರು.
ಹೆಚ್1ಎನ್1 ಸೋಂಕು, ಚಿಕಿತ್ಸಾ ಕ್ರಮಗಳ ಕುರಿತು ಮೈಸೂರು ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತ ರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಗುಂಪು ಸಭೆ ಮಾಡಿ ಜಾಗೃತಿ ಮೂಡಿಸಲಾಗಿದೆ. ನಗರ ಪ್ರದೇಶ ದಲ್ಲಿ ಕರಪತ್ರ ಹಂಚುವ ಮೂಲಕ ಹೆಚ್1 ಎನ್1(ಹಂದಿಜ್ವರ) ಸೋಂಕಿನ ಬಗ್ಗೆ ಅರಿವು ಮೂಡಿಸಲಾಗಿದೆ. ಗುಣ ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.
ಈ ಖಾಯಿಲೆಯ ಸೋಂಕು ಹರಡು ವುದನ್ನು ತಪ್ಪಿಸಲು ವರ್ಷದ 365 ದಿನವೂ ಆರೋಗ್ಯ ಇಲಾಖೆ ಸನ್ನದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಗಂಭೀರ ಸ್ಥತಿಗೆ ತಲು ಪಿದ ಸೋಂಕಿತರನ್ನು ವೆಂಟಿಲೇಟರ್ ನಲ್ಲಿಡಬೇಕಾಗುತ್ತದೆ. ಇದಕ್ಕಾಗಿ ಮೈಸೂ ರಿನ ಕೆ.ಆರ್.ಆಸ್ಪತ್ರೆಯಲ್ಲಿ 10 ಬೆಡ್ ಇರುವ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಕಳೆದ ವರ್ಷವೂ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿತ್ತು. ಜಿಲ್ಲೆಯ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆಯಲು ಬಂದವರನ್ನು ವೈದ್ಯಾಧಿಕಾರಿ ಗಳು ಪರಿಶೀಲಿಸುವಾಗ ಹೆಚ್1ಎನ್1 ಸೋಂಕಿನ ಸಂಶಯ ಬಂದರೆ ಮೈಸೂ ರಿಗೆ ಕಳುಹಿಸುವಂತೆ ಸೂಚನೆ ನೀಡ ಲಾಗಿದೆ. ಇದಕ್ಕೆ ಸಾರ್ವಜನಿಕ ಸಹಕಾರ ಬಹು ಮುಖ್ಯವಾಗಿದೆ. ಆತಂಕ ಮತ್ತು ಗಾಬರಿಗೆ ಒಳಗಾಗದೆ ಆರೋಗ್ಯ ಇಲಾಖೆಯೊಂ ದಿಗೆ ಕೈ ಜೋಡಿಸಬೇಕು. ಇದನ್ನು ತಡೆ ಗಟ್ಟಲು ಮಾಹಿತಿ, ಶಿಕ್ಷಣ, ಸಂವಹನ ಬಹು ಮುಖ್ಯವಾಗಿದೆ ಎಂದರು.
ನಗರ ಪ್ರದೇಶದಲ್ಲಿರುವ ಕೊಳಚೆ ಪ್ರದೇಶ ದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ಇತರೆ ಬಡಾವಣೆಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕಿತರ ಸಂಖ್ಯೆ ಕಡಿಮೆಯಿದ್ದು, ಇದಕ್ಕೆ ಮನೆಗಳು ದೂರ ದೂರದಲ್ಲಿರುವುದೇ ಕಾರಣ ವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯ ಕ್ರಮಾಧಿಕಾರಿ ಡಾ.ಕುಸುಮ ಇದ್ದರು.