ಕುಷ್ಠರೋಗಕ್ಕೆ ಚಿಕಿತ್ಸೆ ಉಚಿತ… ಉದಾಸೀನ ಮಾಡಿದರೆ ಅಂಗವಿಕಲತೆ ಖಚಿತ…!
ಮೈಸೂರು

ಕುಷ್ಠರೋಗಕ್ಕೆ ಚಿಕಿತ್ಸೆ ಉಚಿತ… ಉದಾಸೀನ ಮಾಡಿದರೆ ಅಂಗವಿಕಲತೆ ಖಚಿತ…!

January 31, 2019

ಮೈಸೂರು: ಕುಷ್ಠರೋಗಕ್ಕೆ ಚಿಕಿತ್ಸೆ ಉಚಿತ… ಉದಾಸೀನ ಮಾಡಿದರೆ ಅಂಗವಿಕಲತೆ ಖಚಿತ…! ಈಗೊಂದು ಘೋಷ ವಾಕ್ಯ ಥಟ್ಟನೆ ಎಲ್ಲರ ಗಮನ ಸೆಳೆಯುವ ಮೂಲಕ ಕುಷ್ಠರೋಗದ ದುಷ್ಪರಿಣಾಮ ಮನದಟ್ಟು ಮಾಡಿತು.

ಇದರೊಂದಿಗೆ ಕುಷ್ಠರೋಗ ಸಂಪೂರ್ಣ ಗುಣಮುಖವಾಗುವ ರೋಗ… ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತ… ಕುಷ್ಠರೋಗ ಶಾಪವಲ್ಲ… ವಂಶಪಾರಂಪರ್ಯದಿಂದಲೂ ಬರುವುದಿಲ್ಲ… ದೇಹದ ಮೇಲೆ ಸ್ಪರ್ಶ ಜ್ಞಾನ ವಿಲ್ಲದ ತಾಮ್ರ ವರ್ಣದ ಮಚ್ಚೆಗಳು ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ… ಎಂಬಿತ್ಯಾದಿ ಜಾಗೃತಿ ವಾಕ್ಯಗಳನ್ನೊಳಗೊಂಡ ಫಲಕಗಳನ್ನು ಹಿಡಿದು ಜಾಥಾ ನಡೆಸುವ ಮೂಲಕ ಕುಷ್ಠರೋಗದ ಬಗ್ಗೆ ಎಚ್ಚರ ವಹಿಸುವಂತೆ ಅರಿವು ಮೂಡಿಸಲಾಯಿತು.

ಮೈಸೂರು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂ ಲನಾ ವಿಭಾಗದ ಸಂಯುಕ್ತಾಶ್ರಯದಲ್ಲಿ ಬುಧವಾರ `ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ-2019’ರ ಅಂಗವಾಗಿ ನಡೆದ ಜಾಥಾದಲ್ಲಿ ಕುಷ್ಠರೋಗ ನಿರ್ಮೂಲನೆಗೆ ಮುಂದಾಗುವಂತೆ ಸಂದೇಶ ಸಾರಲಾಯಿತು.

ಆಂದೋಲನದ ಅಂಗವಾಗಿ ಜ.30 ರಿಂದ ಫೆ.13ರವರೆಗೆ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಲು ನಾನಾ ಕಾರ್ಯಕ್ರಮ ಗಳನ್ನು ಜಿಲ್ಲೆಯಾದ್ಯಂತ ಏರ್ಪಡಿಸಿದ್ದು, ಇದರ ಅಂಗವಾಗಿ ನಡೆದ ಜಾಥಾದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡು ಕುಷ್ಠ ರೋಗದ ಬಗ್ಗೆ ಹಲವು ಮಹತ್ವದ ವಿಚಾರ ಗಳನ್ನು ಸಾರ್ವಜನಿಕರಿಗೆ ಮುಟ್ಟಿಸಿದರು.

ಕುಷ್ಠರೋಗವು `ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ’ ಎಂಬ ಸೂಕ್ಷ್ಮಾಣುವಿನಿಂದ ಬರುವ ಕಾಯಿಲೆ. ಮುಖ್ಯವಾಗಿ ಚರ್ಮ, ನರ ಮತ್ತು ಶ್ವಾಸನಾಳದಲ್ಲಿ ಪ್ರಭಾವ ಬೀರುವ ರೋಗ. ಸಮುದಾಯದಲ್ಲಿ ಚಿಕಿತ್ಸೆ ಪಡೆ ಯದೇ ಇರುವ ರೋಗಿಗಳು ಕೆಮ್ಮಿದಾಗ ಮತ್ತು ಸೀನಿದಾಗ ಕುಷ್ಠ ರೋಗಾಣುಗಳು ಶರೀರದಿಂದ ಹೊರಬಂದು ಇತರರಿಗೆ ಹರಡಲು ಕಾರಣವಾಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ರವಾನಿಸಲಾಯಿತು.

ಮೈಸೂರಿನ ಜಿಲ್ಲಾ ಆರೋಗ್ಯ ಅಧಿ ಕಾರಿಗಳ ಕಚೇರಿ ಆವರಣದಲ್ಲಿ ಜಾಥಾಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಶುಪತಿ ಹಸಿರು ನಿಶಾನೆ ತೋರಿದರು. ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎಸ್. ಮಂಜುಪ್ರಸಾದ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ, ಜಿಲ್ಲಾ ಕಾಲರಾ ನಿಯಂತ್ರಣಾಧಿಕಾರಿ ಡಾ.ಉಮೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿರಾಜ್ ಅಹಮ್ಮದ್, ಆರೋಗ್ಯ ಇಲಾಖೆ ಸಿಬ್ಬಂದಿಯಾದ ಕೆ.ಎಂ.ಮಹದೇವಯ್ಯ, ಶಿವರಾಜು, ಪ್ರಕಾಶ್, ಗಿರೀಶ್, ಸಂದೀಪ್ ಮತ್ತಿತರರು ಹಾಜರಿದ್ದರು.

Translate »