ಜೆಸಿಬಿಯಿಂದ ಗಾಯಗೊಂಡ ನಾಗರಹಾವುಗಳಿಗೆ ಚಿಕಿತ್ಸೆ
ಮೈಸೂರು

ಜೆಸಿಬಿಯಿಂದ ಗಾಯಗೊಂಡ ನಾಗರಹಾವುಗಳಿಗೆ ಚಿಕಿತ್ಸೆ

April 18, 2019

ಮೈಸೂರು: ಕಾಮಗಾರಿಯೊಂದರ ವೇಳೆ ಜೆಸಿಬಿಗೆ ಸಿಲುಕಿ ಗಾಯಗೊಂಡಿದ್ದ ಮೂರು ನಾಗರಹಾವುಗಳನ್ನು ಉರಗ ತಜ್ಞ, ಅಗ್ನಿಶಾಮಕ ಸಿಬ್ಬಂದಿ ಕೆಂಪರಾಜು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಮೇಟಗಳ್ಳಿಯಲ್ಲಿರುವ ಭಾರತೀಯ ನೋಟು ಮುದ್ರಣ ಕಾರ್ಖಾನೆಯಲ್ಲಿ ಜೆಸಿಬಿ ಗುಂಡಿ ತೋಡುತ್ತಿದ್ದಾಗ ಮಣ್ಣಿನೊಂದಿಗೆ ನಾಗರಹಾವೊಂದು ಜೆಸಿಬಿ ಬಕೆಟ್‍ನಲ್ಲಿ ಮೇಲಕ್ಕೆ ಬಂದಿದೆ. ಈ ವೇಳೆ ಅದಕ್ಕೆ ಪೆಟ್ಟಾಗಿದೆ. ತಕ್ಷಣ ಅದನ್ನು ಪಕ್ಕದಲ್ಲಿ ಬಿಟ್ಟ ಚಾಲಕ, ಮತ್ತೊಂದು ಕಡೆ ಗುಂಡಿ ತೋಡಲು ಮುಂದಾದಾಗ ಮತ್ತೆರಡು ನಾಗರಹಾವು ಕಂಡು ಬಂದಿವೆ. ಈ ಮೂರು ಹಾವಿಗೂ ಗಾಯವಾಗಿದೆ. ವಿಷಯ ತಿಳಿದು ಆರ್‍ಬಿಐ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕೆಂಪರಾಜು ಸ್ಥಳಕ್ಕೆ ಬಂದು ಗಾಯಗೊಂಡಿದ್ದ ಮೂರು ಹಾವನ್ನು ರಕ್ಷಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ನಂತರ ಪಶುವೈದ್ಯಕೀಯ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಪಶುವೈದ್ಯ ಡಾ.ಯಶವಂತ ಕುಮಾರ್ ಹಾಗೂ ಡಾ.ರುದ್ರೇಗೌಡ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಹಾವುಗಳಿಗೆ ಚಿಕಿತ್ಸೆ ನೀಡಿದ್ದಾರೆ. ನಂತರ ಎಲ್ಲಾ ಹಾವುಗಳನ್ನು ಸಾಮಾಜಿಕ ಅರಣ್ಯಕ್ಕೆ ಬಿಡಲಾಯಿತು.

Translate »