ಮೈವಿವಿ ವೆಬ್‍ಸೈಟ್ ಹ್ಯಾಕ್ ಯತ್ನ!
ಮೈಸೂರು

ಮೈವಿವಿ ವೆಬ್‍ಸೈಟ್ ಹ್ಯಾಕ್ ಯತ್ನ!

May 15, 2019

ತಕ್ಷಣ ಎಚ್ಚೆತ್ತು ಮಾಹಿತಿ ಸೋರಿಕೆಯಾಗದಂತೆ ತಡೆದ ಸಿಬ್ಬಂದಿ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್ ಹ್ಯಾಕ್ ಮಾಡುವ ಯತ್ನ ನಡೆದಿದ್ದು, ಅಲರ್ಟ್ ಕಾಲ್ ಬರುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ಕಂಪ್ಯೂ ಟರ್ ಸೈನ್ಸ್ ವಿಭಾಗದ ಸಿಬ್ಬಂದಿ ಯಾವುದೇ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ವಿಭಾಗದ ವೆಬ್‍ಸೈಟ್ ಹ್ಯಾಕ್ ಮಾಡಲು ದುಷ್ಕರ್ಮಿಗಳು ಮಂಗಳವಾರ ಮಧ್ಯಾಹ್ನ ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಕೆಲವು ಪೇಜ್‍ಗಳನ್ನು ಈ ವೆಬ್‍ಸೈಟ್‍ಗೆ ಡಂಪ್ ಮಾಡಲು ಪ್ರಯತ್ನಿಸಿದ್ದಾರೆ. ಕೂಡಲೇ ಸುರಕ್ಷತಾ ಸಾಧನವಾದ ಫೈರ್‍ವಾಲ್‍ನಿಂದ ಅಲರ್ಟ್ ಮೆಸೇಜ್ ರವಾನೆಯಾಗಿದೆ. ಕೂಡಲೆ ಎಚ್ಚೆತ್ತ ಕಂಪ್ಯೂಟರ್ ಸೈನ್ಸ್ ವಿಭಾಗದ ಸಿಬ್ಬಂದಿ ಕ್ಷಿಪ್ರಗತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಹ್ಯಾಕ್ ಯತ್ನ ವಿಫಲಗೊಳಿಸಿದ್ದಾರೆ.

ಈ ಕುರಿತಂತೆ ಮೈಸೂರು ವಿವಿ ಕುಲಪತಿಗಳ ವಿಶೇಷಾಧಿಕಾರಿ ಹಾಗೂ ಕಂಪ್ಯೂಟರ್ ತಜ್ಞ ಡಾ.ಎಚ್.ಕೆ.ಚೇತನ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮಂಗಳವಾರ ಮಧ್ಯಾಹ್ನದ ವೇಳೆ ಮೈಸೂರು ವಿವಿಯ ಉಪ ವೆಬ್‍ಸೈಟ್‍ಗೆ ಹ್ಯಾಕರ್‍ಗಳಿಂದ ಸಮಸ್ಯೆ ಇರುವುದು ಗಮನಕ್ಕೆ ಬಂತು. ಕೂಡಲೇ ಸರ್ವರ್ ಡೌನ್ ಮಾಡಿ ವೆಬ್‍ಸೈಟ್ ರಿಪೇರಿ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಮೈಸೂರು ವಿವಿಯ ಮುಖ್ಯ ವೆಬ್‍ಸೈಟ್‍ಗೆ ಯಾವುದೇ ಅಡಚಣೆಯಾಗಿಲ್ಲ. ಕಾರಣ ಆ ವೆಬ್‍ಸೈಟ್‍ಗೆ ಅತ್ಯುತ್ಕೃಷ್ಟ ಗುಣಮಟ್ಟದ ಫೈರ್‍ವಾಲ್ ಅಳವಡಿಸಲಾಗಿದೆ. ಪ್ರತಿಷ್ಠಿತ ಕಂಪನಿಗಳ ವೆಬ್‍ಸೈಟ್‍ಗೆ ಇಂತಹ ಫೈರ್‍ವಾಲ್ ಅಳವಡಿಸಲಾಗುತ್ತದೆ. ಹ್ಯಾಕರ್‍ಗಳು ವೆಬ್‍ಸೈಟ್ ಹ್ಯಾಕ್ ಮಾಡಲು ಯತ್ನಿಸುತ್ತಿದ್ದಂತೆ ಸಂದೇಶ ರವಾನಿಸುತ್ತದೆ. ಇದರಿಂದ ಎಚ್ಚೆತ್ತು ಕೊಂಡು ಹ್ಯಾಕ್ ಮಾಡುವುದನ್ನು ತಡೆಗಟ್ಟಬಹುದು. ಹ್ಯಾಕ್ ಮಾಡುವ ವೇಳೆ ಸಾಮಾನ್ಯವಾಗಿ ಹತ್ತಾರು ಪೇಜ್‍ಗಳನ್ನು ವೆಬ್‍ಸೈಟ್‍ಗೆ ತುಂಬು(ಡಂಪ್)ತ್ತಾರೆ. ಆ ನಂತರವಷ್ಟೇ ಹ್ಯಾಕ್ ಮಾಡಲು ಸಾಧ್ಯ. ನಮ್ಮ ಫೈರ್‍ವಾಲ್ ಒಂದು ಪೇಜ್ ಡಂಪ್ ಮಾಡುತ್ತಿದ್ದಂತೆ ಸಂದೇಶ ರವಾನಿಸಿದೆ. ಇದರಿಂದ ಹ್ಯಾಕಿಂಗ್ ಮಾಡುವುದು ಅಸಾಧ್ಯ. ಯಾವ ಐಪಿ ಅಡ್ರೆಸ್‍ನಿಂದ ಹ್ಯಾಕ್‍ಗೆ ಪ್ರಯತ್ನ ನಡೆದಿದೆ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಅದಕ್ಕಾಗಿ ಲಕ್ಷಾಂತರ ಲಾಕ್ ಓಪನ್ ಮಾಡಬೇಕಾಗುತ್ತದೆ ಎಂದರು.

Translate »