ಮೈಸೂರು, ಫೆ.23(ಎಸ್‍ಪಿಎನ್)-`ವೃತ್ತಿ’ ಮತ್ತು `ಓದು’ ಎರಡನ್ನೂ ಒಟ್ಟಿಗೇ ಆಯ್ಕೆ ಮಾಡಿಕೊಂಡು ವಿವಿ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಿರಿಯ ಸಾಹಿತಿ ತ.ಸು.ಶಾಮರಾಯರ ಆದರ್ಶ, ವ್ಯಕ್ತಿತ್ವ ಹಾಗೂ ಅವರ ಜೀವಿತಾವಧಿಯಲ್ಲಿ ಬದುಕು ಕಟ್ಟಿಕೊಂಡ ಮಾರ್ಗಗಳು ಆದರ್ಶವಾಗಲಿ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ವಿಜಯಕುಮಾರಿ ಎಸ್.ಕರಿಕಲ್ ಆಶಿಸಿದರು.
ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಕಸಾಪ ಹಾಗೂ ವಿವಿ ಸಂಜೆ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ `ತ.ಸು.ಶಾಮರಾಯ ದತ್ತಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಸಾರಂಗದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ವರ್ಷದಲ್ಲೇ 26 ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ತ.ಸು.ಶಾಮರಾಯರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ನೂರಾರು ಉಪಯುಕ್ತ ಪುಸ್ತಕಗಳು ಪ್ರಕಟವಾಗಿವೆ ಎಂದು ತಿಳಿಸಿದರು.
ವಿವಿ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಬಿ.ಎನ್.ಯಶೋಧ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಕೆ.ಅಕ್ಕಮಹಾದೇವಿ, ಸಿ.ಡಿ.ಪರಶುರಾಮು, ಎಂ.ಡಿ.ಚನ್ನಬಸಪ್ಪ, ಸಾಹಿತಿ ಜಯಪ್ಪ ಹೊನ್ನಾಳಿ, ಮೈಸೂರು ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.