ದಸರಾ ಗಾಳಿಪಟ ಉತ್ಸವ
ಮೈಸೂರು

ದಸರಾ ಗಾಳಿಪಟ ಉತ್ಸವ

September 29, 2018

ಮೈಸೂರು:  ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಗಾಳಿಪಟ ಉತ್ಸವ ಶನಿವಾರ(ಸೆ.29) ಸಂಜೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಆರಂಭವಾಗಲಿದ್ದು, ಎರಡು ದಿನಗಳ ಕಾಲ ಈ ಉತ್ಸವ ಮನರಂಜಿಸಲಿದೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರ ವಾರ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಳೆ ಸಂಜೆ 4 ಗಂಟೆಗೆ ಗಾಳಿಪಟ ಉತ್ಸವವನ್ನು ಪ್ರವಾಸೊಧ್ಯಮ ಸಚಿವ ಸಾ.ರಾ.ಮಹೇಶ್ ಅವರ ಗೈರು ಹಾಜರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾ ಟಿಸಲಿದ್ದಾರೆ.

ವೃತ್ತಿನಿರತ ಪಟುಗಳೇ ಈ ಉತ್ಸವ ದಲ್ಲಿ ಪಾಲ್ಗೊಂಡು ಗಾಳಿಪಟಗಳನ್ನು ಹಾರಿಸಲಿದ್ದಾರೆ. ಉತ್ಸವದಲ್ಲಿ ಮುಂಬೈನಿಂದ ನಾಲ್ವರು, ಸೂರತ್‍ನಿಂದ ಐವರು, ಅಹಮದಾಬಾದ್‍ನಿಂದ 6 ಮಂದಿ, ಹೈದರಬಾದ್‍ನಿಂದ ಮೂವರು, ಮಂಗಳೂರಿನಿಂದ 10 ಮಂದಿ ಅಂತರರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಂಡು ಅನುಭವ ಹೊಂದಿರುವವರು ತಮ್ಮ ತಮ್ಮ ಬಳಿಯಿರುವ ವರ್ಣರಂಜಿತ ಪಟಗಳನ್ನು ಹಾರಿಸಲಿದ್ದಾರೆ ಎಂದು ತಿಳಿಸಿದರು.

ನಾಳೆ ಸಂಜೆ ಆರಂಭವಾಗಲಿರುವ ಗಾಳಿಪಟ ಉತ್ಸವದಲ್ಲಿ ಶಾಲಾ ಮಕ್ಕಳು ವೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡುವಂತೆ ಡಿಡಿಪಿಐ ಮೂಲಕ ಸ್ಥಳೀಯ ಶಾಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ನಾಳೆ ಸಂಜೆ 4ರಿಂದ ರಾತ್ರಿ 7 ಗಂಟೆಯ ವರೆಗೂ ಗಾಳಿಪಟಗಳನ್ನು ಹಾರಿಸಲಾಗುತ್ತದೆ. ಸೆ.30ರಂದು ಬೆಳಿಗ್ಗೆ 9ರಿಂದಲೇ ಗಾಳಿಪಟ ಉತ್ಸವವನ್ನು ಆರಂಭಿಸಲಾಗುತ್ತದೆ. ಈಗಾಗಲೇ ಹವಾಮಾನ ಇಲಾಖೆಯಿಂದ ವರದಿಯನ್ನು ತರಿಸಿಕೊಳ್ಳಲಾಗಿದ್ದು, ಪಟಗಳ ಹಾರಾಟಕ್ಕೆ ವಾತಾವರಣ ಪೂರಕವಾಗಿರುತ್ತದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 8 ಗಂಟೆಯವರೆಗೂ ಗಾಳಿಪಟಗಳು ಬಾನಲ್ಲಿ ಹಾರಾಡಲಿವೆ ಎಂದರು.

ಇದೇ ವೇಳೆ ಗಾಳಿಪಟಗಳ ಅಂತರಾಷ್ಟ್ರೀಯ ಪಟು ಹಾಗೂ ಟೀಮ್ ಮಂಗಳೂರು ಸಂಸ್ಥೆಯ ಮುಖ್ಯಸ್ಥ ಸರ್ವೇಶ್ವರರಾವ್ ಮಾತನಾಡಿ, ಫ್ರಾನ್ಸ್, ಥಾಯ್‍ಲ್ಯಾಂಡ್, ಕೊರಿಯಾ, ಹಾಂಗ್‍ಕಾಂಗ್ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ಗಾಳಿಪಟಗಳ ಸ್ಪರ್ಧೆಯಲ್ಲಿ ಮಂಗಳೂರಿನ ಪಟುಗಳು ಭಾರತವನ್ನು ಪ್ರತಿನಿಧಿಸಿ, ಬಹುಮಾನಗಳನ್ನು ಗಳಿಸಿದ್ದಾರೆ. ಮಂಗಳೂರಿನ ಸಮುದ್ರ ತೀರದಲ್ಲಿ ಗಾಳಿಪಟ ಸ್ಪರ್ಧೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಪಟಗಳನ್ನು ತಯಾರಿಸಲಾಗಿದೆ. ಪೇಪರ್, ಪ್ಲಾಸ್ಟಿಕ್ ಪೇಪರ್‍ನಿಂದ ನಾವು ಪಟ ತಯಾ ರಿಸುವುದಿಲ್ಲ. ಇದಕ್ಕೆ ಬದಲಾಗಿ ಬಟ್ಟೆಯ ಸ್ವರೂಪದಲ್ಲಿರುವ ಹೆಬ್ರಿಕ್ ತಯಾರಿಸಲಾಗಿದೆ. ಹಾಗಾಗಿ ಪಟಗಳು ಸ್ವಚ್ಛಂದವಾಗಿ ಹಾರಾಡ ಲಿವೆ. ಅಲ್ಲದೆ ಗಾಳಿ, ಮಳೆಯಿಂದಲೂ ಹಾನಿಯಾಗುವುದಿಲ್ಲ ಎಂದು ಹೇಳಿದರು.

ಗಿನ್ನಿಸ್ ದಾಖಲೆಗೆ ಪಾತ್ರವಾಗಿರುವ 36 ಅಡಿ ಎತ್ತರ, 10 ಅಡಿ ಅಗಲದ ಕಥಕಳಿ ವಿನ್ಯಾಸದ ಪಟವನ್ನು ಮೈಸೂರು ದಸರಾ ಗಾಳಿಪಟ ಉತ್ಸವದಲ್ಲಿ ಹಾರಿಸು ತ್ತೇವೆ. ಕಥಕಳಿ, ಭರತನಾಟ್ಯ, ಯಕ್ಷಗಾನ ಸೇರಿ ದಂತೆ ವಿವಿಧ ಸಂಸ್ಕೃತಿಯನ್ನು ಆಗಸದ ಮೂಲಕ ಪ್ರಚಾರಪಡಿಸುವ ನಿಟ್ಟಿನಲ್ಲಿ ನಮ್ಮ ತಂಡದ ಪಟುಗಳು ಗಾಳಿಪಟ ಸಿದ್ದಪಡಿಸಿದ್ದಾರೆ. ಇವು ನೋಡುಗರ ಮನಸೂರೆ ಗೊಳ್ಳಲಿವೆ ಎಂದು ಹೇಳಿದರಲ್ಲದೆ, ಭಾನುವಾರ ಬೆಳಿಗ್ಗೆ ಪಟಗಳನ್ನು ತಯಾರಿಸು ವುದು, ಸೂತ್ರ ಹಾಕುವುದು, ಪಟ ಹಾರಿಸುವ ವಿಧಾನ, ಬಾಲಂಗೋಚಿಗಳ ಅಳವಡಿಕೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಕ್ಕಳಿಗೆ ಉಚಿತವಾಗಿ ಹೇಳಿಕೊಡಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಹೆಚ್.ಪಿ.ಜನಾರ್ಧನ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಇದ್ದರು.

Translate »