ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವತಿಯರನ್ನು ಅಪಹರಿ ಸಿರುವ ಬಗ್ಗೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಜನತಾನಗರ ನಿವಾಸಿ ಐಶ್ವರ್ಯ(17)ಅವರನ್ನು ಅ.19ರಂದು ಆಕೆಯ ಪ್ರಿಯಕರ ಮಹೇಶ್ ಎಂಬಾತ ಅಪಹರಿಸಿದ್ದಾನೆ ಎಂದು ಐಶ್ವರ್ಯ ತಾಯಿ ಲಕ್ಷ್ಮಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ತಮ್ಮ ಪುತ್ರಿ ಐಶ್ವರ್ಯ ಮತ್ತು ಮಹೇಶ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ನಾವು ಅವರಿಬ್ಬರಿಗೂ ಬುದ್ಧಿವಾದ ಹೇಳಿದ್ದೆವು. ಆದರೆ ಅ.19ರಂದು ಮಧ್ಯಾಹ್ನ 1 ಗಂಟೆ ಯಿಂದ ಸಂಜೆ 7 ಗಂಟೆಯೊಳಗಿನ ಸಮಯದಲ್ಲಿ ಮಹೇಶ್ ತನ್ನ ಪುತ್ರಿಯನ್ನು ಅಪಹರಿಸಿದ್ದಾನೆ ಎಂದು ಲಕ್ಷ್ಮಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ಟಿ.ಕೆ.ಬಡಾವಣೆ ನಿವಾಸಿ ಸಿ.ಸಹನಾ(17) ಅವರನ್ನು ಧನುಷ್ ಎಂಬಾತ ಅಪಹರಿ ಸಿದ್ದಾನೆ ಎಂದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ತಮ್ಮ ಪುತ್ರಿ ಸಹನಾಳನ್ನು ಅ.16ರಂದು ಧನುಷ್ ಎಂಬಾತ ಅಪಹರಿಸಿದ್ದಾನೆ ಎಂದು ಆಕೆಯ ತಂದೆ ಚಂದ್ರಕುಮಾರ್ ಅವರು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಎರಡು ಪ್ರಕರಣಗಳನ್ನು ಭಾರತ ದಂಡ ಸಂಹಿತೆ 363 (ಅಪಹರಣ)ರಡಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಈ ಯುವತಿಯರ ಬಗ್ಗೆ ಮಾಹಿತಿ ಇರುವವರು ಸರಸ್ವತಿಪುರಂ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418123 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.