ಸಕ್ಕರೆ ನಾಡಿನಲ್ಲಿ ಕದನ ಕುತೂಹಲ: ಇಂದು ಕೆಆರ್ ಪೇಟೆಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರ
ಮಂಡ್ಯ

ಸಕ್ಕರೆ ನಾಡಿನಲ್ಲಿ ಕದನ ಕುತೂಹಲ: ಇಂದು ಕೆಆರ್ ಪೇಟೆಯಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚುನಾವಣಾ ಪ್ರಚಾರ

October 26, 2018

ಮಂಡ್ಯ: ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಇನ್ನು 9 ದಿನಗಳಷ್ಟೇ ಬಾಕಿ ಇದ್ದು, ಒಕ್ಕಲಿಗರ ಶಕ್ತಿಕೇಂದ್ರ ಮಂಡ್ಯವನ್ನು ವಶಕ್ಕೆ ಪಡೆಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ಕಸರತ್ತು ಆರಂಭಿಸಿವೆ. ಸಕ್ಕರೆ ನಾಡಿನಲ್ಲಿ ಚುನಾ ವಣಾ ಪ್ರಚಾರ ಬಿರುಸಿನಿಂದ ಸಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ಮಧ್ಯ ನೇರ ಪೈಪೋಟಿ ಕಂಡು ಬರುತ್ತಿದೆ. ಇದೇ ವೇಳೆ ಎರಡೂ ಕಡೆಯ ಅಭ್ಯರ್ಥಿಗಳಿಗೂ ಒಳೇಟಿನ ಆತಂಕ ಶುರುವಾಗಿದೆ. ಬಿಜೆಪಿ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳು ಮತ್ತು ನಾಯಕರು ಜಿಲ್ಲೆಯಾ ದ್ಯಂತ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಜಿಲ್ಲೆಯ ಕೈ ನಾಯಕರೊಂದಿಗೆ ಸಂಧಾನ ನಡೆಸಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರ ಪರ ಪ್ರಚಾರ ನಡೆಸಿ ಗೆಲ್ಲಿಸುವಂತೆ ಸೂಚಿಸಿದ್ದಾರೆ. ಅ.26ರಂದು ಸಿಎಂ ಕುಮಾರಸ್ವಾಮಿ ಕೆ.ಆರ್.ಪೇಟೆಯಿಂದ ಪ್ರಚಾರ ಆರಂಭಿಸುವ ಮೂಲಕ ಶಿವರಾಮೇಗೌಡರ ಗೆಲುವಿಗೆ ಶ್ರಮಿಸಲಿದ್ದಾರೆ.

ಬಣ ರಾಜಕಾರಣ: ಮೂಲ ಕಾರ್ಯಕರ್ತರನ್ನು ಬಿಟ್ಟು ವಲಸಿಗರಿಗೆ ಮಣೆ ಹಾಕಿದ್ದರಿಂದ ಬೇಸರಗೊಂಡಿರುವ ಬಿಜೆಪಿಯ ಸ್ಥಳೀಯ ನಾಯಕರು ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರನ್ನು ಒಂಟಿಯಾಗಿಯೇ ಓಡುವಂತೆ ಮಾಡಿದ್ದಾರೆ. ರಾಜ್ಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮತ್ತು ಆರ್.ಅಶೋಕ್ ನೇತೃತ್ವದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಷ್ಟೇ ಕಾಣಿಸಿಕೊಳ್ಳುವ ಸ್ಥಳೀಯ ನಾಯಕರು, ಅಭ್ಯರ್ಥಿಯೊಂದಿಗೆ ಗ್ರಾಮ ಮಟ್ಟದ ಪ್ರಚಾರದಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದಾರೆ.

ಮಳವಳ್ಳಿಯಲ್ಲಿ ಬಿಜೆಪಿ ಬಣ ರಾಜಕೀಯ ಶುರುವಾಗಿದೆ. ಮಳವಳ್ಳಿಯಲ್ಲಿ ಮುನಿರಾಜು ಹಾಗೂ ಅವರ ಬೆಂಬಲಿಗರು ರೈತ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆ ಏರ್ಪ ಡಿಸಿದ್ದರು. ಬಿಜೆಪಿ ರಾಜ್ಯ ಹಿರಿಯ ಉಪಾಧ್ಯಕ್ಷ ಬಿ.ಸೋಮಶೇಖರ ತಮ್ಮ ಕಚೇರಿಯಲ್ಲಿ ಬೆಂಬಲಿಗರ ಜೊತೆ ಆರ್. ಅಶೋಕ್ ಅವರಿಗಾಗಿ ಕಾದು ಕುಳಿತಿದ್ದರು. ಅಶೋಕ್ ಅವರು ಬಿ.ಸೋಮಶೇಖರ್ ಅವರಿದ್ದ ಜಾಗಕ್ಕೆ ತೆರಳಿ ಪತ್ರಿಕಾಗೋಷ್ಠಿ ನಡೆಸಿದರು. ನಂತರ ಎಲ್ಲರನ್ನು ಜೊತೆಗೂಡಿಸಿ ಸಭೆಗೆ ಕರೆತರುವ ತಂತ್ರವನ್ನು ಜಿಲ್ಲಾಧ್ಯಕ್ಷ ನಾಗಣ್ಣಗೌಡ ಮೂಲಕ ರೂಪಿಸಿದ್ದರು. ಪತ್ರಿಕಾಗೋಷ್ಠಿ ನಡೆಸಿದ ನಂತರ ಜಿಲ್ಲಾಧ್ಯಕ್ಷ ನಾಗಣ್ಣಗೌಡ ಅವರು ಬಿ.ಸೋಮಶೇಖರ ಅವರ ಕಾರಿನೊಳಗೆ ಕುಳಿತುಕೊಂಡರು.

ಇದರಿಂದ ಕೆರಳಿದ ಬಿ.ಸೋಮಶೇಖರ್, ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ. ನೀವು ಕಾರಿನಿಂದ ಇಳಿಯಿರಿ ಎಂದು ಹೇಳಿದರು. ಅಲ್ಲೇ ಇದ್ದ ಅಲ್ಪ ಸಂಖ್ಯಾತರ ರಾಜ್ಯಾಧ್ಯಕ್ಷ ಅಬ್ದುಲ್ ನಜೀಂ ಜಿಲ್ಲಾಧ್ಯಕ್ಷರನ್ನು ಸಮಾಧಾನಪಡಿಸಿದ್ದಾರೆ. ನಂತರ ಬಿ.ಸೋಮಶೇಖರ್ ಬೆಂಬಲಿಗರು ಜಿಲ್ಲಾಧ್ಯಕ್ಷರ ಜೊತೆ ಮಾತಿನ ಚಕಮಕಿ ನಡೆಸಿದರು. ಈ ಘಟನೆಯಿಂದ ಮಳವಳ್ಳಿಯ ಬಿಜೆಪಿಯಲ್ಲಿ ಎರಡು ಗುಂಪು ಇರುವುದು ಬಹಿರಂಗವಾಗಿದೆ.

ಮೈತ್ರಿ ಕೂಟದಲ್ಲೂ ಅಸಮಾಧಾನ: ಮೈತ್ರಿಕೂಟದ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡರ ಪರ ಜೆಡಿಎಸ್ ನಾಯಕರ ಹೊರತು ಕಾಂಗ್ರೆಸ್‍ನ ಸ್ಥಳೀಯ ನಾಯಕರಲ್ಲಿ ಬಹಳಷ್ಟು ಮಂದಿ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ.

ಇದರ ನಡುವೆ ರಮ್ಯಾ ಅಭಿಮಾನಿ ಕೊ.ಪು.ಗುಣಶೇಖರ್ ಅವರನ್ನೊಳಗೊಂಡ ಅಭಿಮಾನಿಗಳು ಮತ್ತು ಎಲ್‍ಆರ್ ಎಸ್ ವಿರೋಧಿಗಳೆಲ್ಲಾ ನೋಟಾ ಚಲಾವಣೆಗೆ ಕರೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಮೈತ್ರಿ ಕೂಟದ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇ ಗೌಡ ಅವರನ್ನು ಚಿಂತೆ ಮಾಡುವಂತೆ ಮಾಡಿತ್ತು. ಮೊನ್ನೆ ಸಿದ್ದರಾಮಯ್ಯ ಅವರು ಬಂದು ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಸೇರಿಸಿ ಸಭೆ ನಡೆಸಿದ ಬಳಿಕ ಸ್ವಲ್ಪ ಬದಲಾವಣೆ ಕಾಣಲಾರಂಭಿಸಿದೆ.

ಪೂರ್ಣ ಓಟ್ ಆಗಲ್ಲ: ಇಷ್ಟವಿಲ್ಲದಿದ್ದರೂ ಎದುರಾಗಿರುವ ಈ ಉಪಚುನಾವಣೆಯಲ್ಲಿ ಮತದಾರರಲ್ಲಿ ಅಷ್ಟೇನೂ ಉತ್ಸುಕತೆ ಕಾಣಿಸಿಲ್ಲ. ಸದ್ಯದ ಮಾಹಿತಿ ಪ್ರಕಾರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವುದೂ ಅನುಮಾನ ಎನ್ನಲಾಗುತ್ತಿದೆ.

ಒಟ್ಟಾರೆ ಮೈತ್ರಿಕೂಟದ ಎಲ್.ಆರ್.ಶಿವರಾಮೇಗೌಡ ಮತ್ತು ಬಿಜೆಪಿಯ ಡಾ.ಸಿದ್ದರಾಮಯ್ಯ, ಜನತಾ ಪರಿವಾರದ ಕೌಡ್ಲೆ ಚನ್ನಪ್ಪ ಸೇರಿದಂತೆ ಕಣದಲ್ಲಿರುವ 10 ಮಂದಿಯ ರಾಜಕೀಯ ಭವಿಷ್ಯ ತಿಳಿಯಲು ನ. 6ರವರೆಗೆ ಕಾಯಬೇಕಿದೆ.

Translate »