ಇಬ್ಬರು ಖದೀಮರ ಸೆರೆ:  ನಗದು, ಚಿನ್ನಾಭರಣ ವಶ
ಮೈಸೂರು

ಇಬ್ಬರು ಖದೀಮರ ಸೆರೆ: ನಗದು, ಚಿನ್ನಾಭರಣ ವಶ

February 4, 2019

ಮೈಸೂರು: ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು, ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಗಾಂಧಿನಗರ 4ನೇ ಕ್ರಾಸ್ ನಿವಾಸಿ ಮೊಹಮದ್ ಅಬ್ರಾನ್ ಮತ್ತು ಮಂಡಿ ಮೊಹಲ್ಲಾ 8ನೇ ಕ್ರಾಸ್ ನಿವಾಸಿ ಶಾಹೀದ್ ಅಫ್ರೀದ್ ಬಂಧಿತರಾಗಿದ್ದು, ಅವರಿಂದ 62,600 ರೂ. ನಗದು ಹಾಗೂ 35,000 ರೂ. ಬೆಲೆಬಾಳುವ ಪ್ಲಾಟಿನಂ ಮತ್ತು ಚಿನ್ನಾಭರಣ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕಲಿ ಕೀ ಬಳಸಿ ಕಾರಿನಲ್ಲಿದ್ದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಮೊಹಮದ್ ಅಬ್ರಾನ್ ವಿರುದ್ಧ ಎನ್‍ಆರ್ ಮತ್ತು ವಿಜಯನಗರ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‍ಆರ್ ಉಪ ವಿಭಾಗದ ಎಸಿಪಿ ಸಿ.ಗೋಪಾಲ್ ಅವರ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಇನ್ಸ್‍ಪೆಕ್ಟರ್‍ಗಳಾದ ಬಿ.ಬಸವರಾಜು, ಎಲ್.ಅರುಣ್, ಸಿಬ್ಬಂದಿಗಳಾದ ಎಸ್.ಜಯಕುಮಾರ್, ಜಯಪಾಲ, ಎಂ.ಎಲಿಯಾಸ್, ಇನಾಯತ್ ಉಲ್ಲಾ ಬೇಗ್, ರವಿಗೌಡ, ಟಿ.ಶಂಕರ್ ಹಾಗೂ ಬಂಡಿವಡ್ಡರ ಅವರು ಭಾಗವಹಿಸಿದ್ದರು.

Translate »