ಮಡಿಕೇರಿಯಲ್ಲಿ ಇಬ್ಬರು ಚೋರರ ಬಂಧನ ಎರಡು ಬಂದೂಕು, ಚಿನ್ನಾಭರಣ ವಶ
ಕೊಡಗು

ಮಡಿಕೇರಿಯಲ್ಲಿ ಇಬ್ಬರು ಚೋರರ ಬಂಧನ ಎರಡು ಬಂದೂಕು, ಚಿನ್ನಾಭರಣ ವಶ

June 5, 2018

ಮಡಿಕೇರಿ: ಇಬ್ಬರು ಚೋರರನ್ನು ಬಂಧಿಸಿರುವ ಮಡಿಕೇರಿ ಪೊಲೀಸರು ರೂ.2 ಲಕ್ಷ ಮೌಲ್ಯದ ಎರಡು ಬಂದೂಕು ಹಾಗೂ 34 ಗ್ರಾಂ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ಕಕ್ಕಬ್ಬೆ ಗ್ರಾಮದ ನಿವಾಸಿ ಕೆ.ಸಿ.ಅಶೋಕ ಹಾಗೂ ನಾಣಯ್ಯ (ವಿಜು) ಬಂಧಿತ ಆರೋಪಿಗಳು. ಕಾಲೂರು ಗ್ರಾಮದ ಜಂಕ್ಷನ್ ಬಳಿ ಬಸ್ ತಂಗುದಾಣದಲ್ಲಿ ಸಂಶಯಾಸ್ಪದವಾಗಿ ಬಂದೂಕು ಹಿಡಿದು ನಿಂತಿದ್ದ ಕೆ.ಸಿ.ಅಶೋಕನನ್ನು ವಿಚಾರಣೆ ನಡೆಸಿದಾಗ ಮಡಿಕೇರಿಯ ಶ್ರೀಓಂಕಾರೇಶ್ವರ ದೇವಾಲಯದ ಬಳಿಯ ಮನೆಯೊಂದ ರಿಂದ ಎರಡು ಬಂದೂಕು ಹಾಗೂ ಚಿನ್ನಾ ಭರಣ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತೊಬ್ಬ ಆರೋಪಿ ನಾಣಯ್ಯ ನನ್ನು ಬಂಧಿಸಿ ಇಬ್ಬರನ್ನೂ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರವಿವಾರ ಬೆಳಗಿನ ಹಾವ 4.30ಗಂಟೆ ಸುಮಾರಿಗೆ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಎನ್.ಯತೀಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ಎನ್. ಸಿದ್ದಯ್ಯ, ಪಿಎಸ್‍ಐ ಚೇತನ್ ಹಾಗೂ ಸಿಬ್ಬಂದಿಗಳು ವಿಶೇಷ ಗಸ್ತು ಕರ್ತವ್ಯದಲ್ಲಿದ್ದಾಗ, ಗಾಳಿಬೀಡು, ಕಾಲೂರು ಕಡೆ ಹೋಗುವ ಜಂಕ್ಷನ್ ಬಳಿಯ ತಂಗುದಾಣದಲ್ಲಿ ಕೈಯ್ಯಲ್ಲಿ ಬಂದೂಕು ಹಿಡಿದು ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಓಡಲೆತ್ನಿಸಿದ ನೆನ್ನಲಾಗಿದೆ. ಕೂಡಲೇ ಆತನನ್ನು ಹಿಡಿದು ವಿಚಾರಿಸಿದಾಗ, ಆತ ಬಂದೂಕಿನ ಯಾವುದೇ ದಾಖಲೆಗಳು ಇಲ್ಲ ಎಂದು ತಿಳಿಸಿದ್ದು, ಕಳೆದ ಒಂದು ತಿಂಗಳ ಹಿಂದೆ ಮಡಿಕೇರಿ ನಗರದ ಓಂಕಾರೇಶ್ವರ ದೇವಾ ಲಯದ ಬಳಿ ಇರುವ ಮನೆಯಿಂದ ರಾತ್ರಿ ಸಮಯ ದಲ್ಲಿ ಕಳ್ಳತನ ಮಾಡಿದ್ದಾಗಿಯೂ, ಈ ಬಂದೂಕಿನೊಂದಿಗೆ ಇನ್ನೊಂದು ಡಬಲ್ ಬ್ಯಾರೆಲ್ ಬಂದೂಕು ಹಾಗೂ ಚಿನ್ನಾಭರಣ ಕಳವು ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಕದ್ದ ಚಿನ್ನಾಭರಣವನ್ನು ಆರೋಪಿಯು ಮಡಿಕೇರಿ ಹಾಗೂ ವೀರಾಜಪೇಟೆಯ ಚಿನ್ನಾಭರಣ ಮಳಿಗೆಗಳಲ್ಲಿ ಮಾರಾಟ ಮಾಡಿದ್ದು, ಈ ಬಂದೂಕನ್ನು ಕೂಡಾ ಯಾರಿಗಾದರೂ ಮಾರಾಟ ಮಾಡಲು ಹೋಗುತ್ತಿದ್ದುದಾಗಿ ತಿಳಿಸಿದ್ದಾನೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಅಶೋಕ್ ಮತ್ತು ನಾಣಯ್ಯ ಅಲಿಯಾಸ್ ವಿಜು ಅವರನ್ನು ವಶಕ್ಕೆ ಪಡೆದುಕೊಂಡು ಸುಮಾರು 2 ಲಕ್ಷ ರೂ.ಮೌಲ್ಯದ ಬಂದೂಕು ಹಾಗೂ 34 ಗ್ರಾಂ. ಚಿನ್ನದ ಒಡವೆಗಳನ್ನು ವಶಪಡಿಸಿ ಕೊಂಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಬಹುಮಾನ ಘೋಷಿಸಿದ್ದಾರೆ.

Translate »