ಸ್ಥಳೀಯ ಸಮಸ್ಯೆ ಅರಿತು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿ :ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ
ಕೊಡಗು

ಸ್ಥಳೀಯ ಸಮಸ್ಯೆ ಅರಿತು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿ :ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ

July 21, 2018

ಮಡಿಕೇರಿ: ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿತು ಸೂಕ್ಷ್ಮವಾಗಿ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಲಹೆ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಗುರುವಾರ ಮಾಹಿತಿ ಪಡೆದು ಮುಖ್ಯ ಮಂತ್ರಿಗಳು ಮಾತನಾಡಿದರು. ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ರಾಜ್ಯದ ಹಲವು ಭಾಗಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ಅವುಗಳನ್ನು ತಿಳಿದು ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಆಶಯ ಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಳೆಯಿಂದ ಹಾನಿಯಾಗಿರುವ ರಸ್ತೆ, ಸೇತುವೆ, ವಾಸದ ಮನೆ, ಬೆಳೆಹಾನಿ, ವಿದ್ಯುತ್, ಹಾಗೆಯೇ ಸರ್ಕಾರಿ ಕಟ್ಟಡಗಳು ನಷ್ಟ ಸಂಬಂಧಿಸಿದಂತೆ ಈಗಾಗಲೇ ಸುಮಾರು 326 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಪರಿ ಹಾರ ಸಂಬಂಧ ಅಗತ್ಯ ಹಣ ಬಿಡುಗಡೆ ಮಾಡಲಾಗುವುದು. ರಸ್ತೆ, ಸೇತುವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಳೆಯಿಂದ ಹಾನಿಯಾಗಿರುವುದನ್ನು ಸರಿಪಡಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿ ಕೊಂಡು ಸರ್ಕಾರಕ್ಕೆ ಕಳುಹಿಸಿಕೊಡು ವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅವರು ಸೂಚಿಸಿದರು.

ಮಳೆಯಿಂದ ಹಾನಿಯಾಗಿರುವ ಕುಟುಂ ಬಗಳಿಗೆ ಮನೆ ನಿರ್ಮಿಸಿಕೊಡಲು ಹೆಚ್ಚಿನ ನಿಬಂಧನೆಗಳನ್ನು ಹಾಕದೆ, ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಅವರು ಸಲಹೆ ಮಾಡಿದರು. ಕಾಫಿ ಬೆಳೆಗಾರರಿಗೆ ಪರಿಹಾರ ವಿತರಣೆ ಮಾಡಬೇಕು.

ಮಳೆಯಿಂದಾಗಿರುವ ನಷ್ಟ ಸಂಬಂಧ ಕಾಫಿ ಬೆಳೆಗಾರರನ್ನು ರಕ್ಷಣೆ ಮಾಡಬೇಕು. ಪರಿಸರ ಸಂರಕ್ಷಣೆಯು ಸಹ ಮಾಡಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ತಿಳಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಮಳೆಹಾನಿ ಪರಿಹಾರ ಸಂಬಂಧಿಸಿದಂತೆ ತಹಶೀಲ್ದಾರರು ನೇರವಾಗಿ ಪರಿಹಾರ ವಿತರಣೆ ಮಾಡುವಂತಾಗಬೇಕು. ಉಪ ವಿಭಾಗಾಧಿಕಾರಿಯವರ ನೇತೃತ್ವದಲ್ಲಿ ಸಮಿತಿ ಅಗತ್ಯವಿಲ್ಲ ಎಂದು ಅವರು ಸಲಹೆ ಮಾಡಿದರು. ಇದಕ್ಕೆ ಧ್ವನಿಗೂಡಿ ಸಿದ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಅವರು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಶೀಘ್ರ ದಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳ ಕುಟುಂಬದವರಿಗೆ ಪರಿಹಾರ ವಿತರಣೆ ಮಾಡಬೇಕು ಎಂದರು.

“ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ನಮ್ಮ ವಿರುದ್ಧ (ಶಾಸಕರ) ಸುಪ್ರಿಂಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾವು ಜೈಲಿಗೆ ಹೋಗಲು ಸಿದ್ಧ ಎಂದು ಕೆ.ಜಿ. ಬೋಪಯ್ಯ ಅವರು ಹೇಳಿದರು.”

ಕಡಮಕಲ್ಲು ಸುಬ್ರಹ್ಮಣ್ಯ ರಸ್ತೆ ನಿರ್ಮಾಣ ಕ್ಕಾಗಿ ಅರಣ್ಯ ಇಲಾಖೆಗೆ ಪ್ರತ್ಯೇಕವಾಗಿ ಪುಷ್ಪಗಿರಿ ಪಕ್ಕದ ಹಮ್ಮಿಯಾಲದಲ್ಲಿ 47 ಎಕರೆ ಭೂಮಿಯನ್ನು ನೀಡಿದ್ದೇವೆ. ಆದರೂ ಸಹ ರಸ್ತೆ ನಿರ್ಮಾಣ ಮಾಡದೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಕೆ.ಜಿ. ಬೋಪಯ್ಯ ಅವರು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲವು ಸಮಸ್ಯೆಗಳನ್ನು ಸರಿಪಡಿಸಿ ಕೊಂಡು ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

ಪೆರುಂಬಾಡಿ ಬಳಿ ಕಳೆದ ವರ್ಷ 25 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಇದುವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಇದಕ್ಕೆ ರೇವಣ್ಣ ಅವರು ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಬೋಜೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ಅವರು ಹಲವು ವಿಚಾರ ಗಳ ಕುರಿತು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಲೋಕೇ ಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಇತರರು ಇದ್ದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಳೆ ಹಾನಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 108 ಲಕ್ಷ ರೂ., ಟೌನ್ ಪಂಚಾಯಿತಿ ವ್ಯಾಪ್ತಿಯಲ್ಲಿ 75 ಲಕ್ಷ ರೂ. ಜಿಲ್ಲಾ ಪಂಚಾ ಯಿತಿ ವ್ಯಾಪ್ತಿಯಲ್ಲಿ 4,822 ಲಕ್ಷ ರೂ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 1263 ಲಕ್ಷ ರೂ., ಸಣ್ಣ ನೀರಾವರಿ 1190 ಲಕ್ಷ ರೂ., ಸೆಸ್ಕ್ ವ್ಯಾಪ್ತಿಯಲ್ಲಿ 131 ಲಕ್ಷ ರೂ., ಪಿಎಂಜಿ ಎಸ್‍ವೈ ವ್ಯಾಪ್ತಿಯಲ್ಲಿ 7 ಲಕ್ಷ ರೂ., ರಾಷ್ಟ್ರೀಯ ಹೆದ್ದಾರಿ ವಿಭಾಗ ದಲ್ಲಿ 113 ಲಕ್ಷ ರೂ., ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸುಮಾರು 326 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅವರು ಮಾಹಿತಿ ನೀಡಿದರು.

Translate »