ಬೆಂಗಳೂರು,ಜು.8(ಎಸಿಪಿ)-ಮುಂಬೈನ ಪಂಚತಾರಾ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿ ರುವ ಅತೃಪ್ತ ಶಾಸಕರು, ನಾಳೆ (ಜು.9) ಬೆಂಗ ಳೂರಿಗೆ ಆಗಮಿಸುವ ನಿರೀಕ್ಷೆ ಇದೆ.
ಮಂಗಳವಾರ ತಮ್ಮನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ನೀಡಿರುವುದಕ್ಕೆ ವಿವರಣೆ ನೀಡಬೇಕೆಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಎಲ್ಲಾ ಶಾಸಕರಿಗೂ ಪ್ರತ್ಯೇಕ ವಾಗಿ ನೋಟೀಸ್ ಜಾರಿ ಮಾಡಿರುವುದರಿಂದ ಶಾಸಕರು ಬೆಂಗಳೂರಿಗೆ ನಾಳೆ ಬರಲಿದ್ದಾರೆ ಎಂದು ಹೇಳಲಾಗಿದೆ. ಮೈತ್ರಿ ಸರ್ಕಾರದ ಸಚಿ ವರುಗಳು ಸಾಮೂಹಿಕ ರಾಜೀನಾಮೆ ನೀಡಿದ್ದು, ಅತೃಪ್ತರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ಉಳಿಸಿ ಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಕಾರ್ಯತಂತ್ರ ರೂಪಿಸಿದ್ದರಾದರೂ ಯಾವುದೇ ಶಾಸಕರು ರಾಜೀನಾಮೆ ಹಿಂಪಡೆಯಲು ತಯಾ ರಿಲ್ಲ ಎಂದು ಜೆಡಿಎಸ್ ಶಾಸಕ ಎ.ಹೆಚ್.ವಿಶ್ವ ನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಇಲ್ಲಿ ಬಂದಿ ರುವ ಯಾರೂ ಸಚಿವ ಸ್ಥಾನಕ್ಕಾಗಿ ಬಂದಿಲ್ಲ. ಎಲ್ಲರೂ ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಬಂದಿದ್ದಾರೆ. ಆದ್ದರಿಂದ ಸಚಿವ ಸ್ಥಾನದ ಆಮಿಷಕ್ಕೆ ಯಾರೂ ಬಲಿಯಾಗುವುದಿಲ್ಲ ಎಂದು ಅವರು ಹೇಳಿದರು.
ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ.ಆದರೆ, ಪಕ್ಷದಲ್ಲಿ ನನಗಾದ ಅವಮಾನವನ್ನು ತಡೆಯುವಲ್ಲಿ ಅವರು ಕೂಡಾ ಅಸಹಾಯಕ ರಾದರು. ಆ ಕಾರಣದಿಂದಲೇ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಅವರು ಹೇಳಿದರು. ಅತೃಪ್ತ ಶಾಸಕರನ್ನು ಸಮಾಧಾನ ಪಡಿಸಲು ಡಿ.ಕೆ. ಶಿವಕುಮಾರ್ ಮುಂಬೈಗೆ ತೆರಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಬರಲಿ ಮಾತನಾಡಿಸಿಕೊಂಡು ಹೋಗಲಿ. ಆದರೆ ಇಲ್ಲಿರುವ ಯಾವ ಶಾಸಕರು ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದರು.