ಮೊದಲ ಹಂತದ ಮತದಾನದಂದು ಪ್ರಧಾನಿ  ನರೇಂದ್ರ ಮೋದಿ ಭಾಷಣ ನಿರ್ಬಂಧಕ್ಕೆ ಆಗ್ರಹ
ಮೈಸೂರು

ಮೊದಲ ಹಂತದ ಮತದಾನದಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ನಿರ್ಬಂಧಕ್ಕೆ ಆಗ್ರಹ

April 9, 2019

ಮೈಸೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾ ವಣೆ ಮತದಾನ ನಡೆಯುವ ದಿನವಾದ ಏ.18ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವುದು ಚುನಾವಣಾ ನೀತಿ ಸಂಹಿತೆ ಉಲ್ಲಂ ಘನೆ ಮಾಡಿದಂತಾಗಲಿದ್ದು, ಈ ಕುರಿತು ಚುನಾವಣಾ ಆಯೋ ಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಹೆಚ್.ಎ.ವೆಂಕಟೇಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.18 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಅದೇ ದಿನ ರಾಜ್ಯದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಭಾಷಣ ಮಾಡಿದರೆ ಮತದಾರರ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆ ಚುನಾವಣಾ ಆಯೋಗ ಮೋದಿ ಭಾಷಣಕ್ಕೆ ಅವಕಾಶ ನೀಡಬಾರದು. ಕಾನೂನು ಎಲ್ಲರಿಗೂ ಒಂದೇ, ಪ್ರಜಾಪ್ರಭುತ್ವದ ಆಶಯ ಕಾಪಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಹಿಳಾ ವಿರೋಧಿ: ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದರೂ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಹಿಳಾ ವಿರೋಧಿ. ಆ ಕಾರಣದಿಂದಲೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿಲ್ಲ ಎಂದು ದೂರಿದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಗೆಲ್ಲುತ್ತಾರೆ. ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದು, ತಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, 2014ನೇ ಸಾಲಿನ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮೈಸೂರನ್ನು ಪ್ಯಾರಿಸ್ ಮಾದರಿಯಲ್ಲಿ ಅಭಿವೃದ್ಧಿ ಮಾಡ ಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಆಶ್ವಾಸನೆ ಸುಳ್ಳಾಗಿದೆ. ಈಗ ಮತ್ತೊಂದು ಚುನಾವಣಾ ಪ್ರಚಾರಕ್ಕೆ ಮೈಸೂರಿಗೆ ಆಗಮಿಸುತ್ತಿರುವುದು ವಿಷಾದನೀಯ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅರವಿಂದ, ರಾಜೇಶ್ ಉಪಸ್ಥಿತರಿದ್ದರು.

Translate »