ತಿ.ನರಸೀಪುರ: ಜಿಲ್ಲೆಯಲ್ಲಿ ನಾಯಕ ಸಮುದಾಯದ ಯುವಕರನ್ನು ಸಂಘಟನೆಯ ವೇದಿಕೆಗೆ ಕರೆ ತರುವ ಮೂಲಕ ಸಮುದಾಯಕ್ಕಾಗುವ ಅನ್ಯಾಯದ ವಿರುದ್ಧ ಹೋರಾಟವನ್ನು ಮಾಡುತ್ತೇನೆ ಎಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ನೂತನ ಜಿಲ್ಲಾಧ್ಯಕ್ಷ ಹೆಚ್.ವಿಜಯಕುಮಾರ್ ಹೇಳಿದರು.
ತಾಲೂಕಿನ ನಿಲಸೋಗೆ ನಾಯಕರ ಬೀದಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮುದಾಯ ಪರ ಯುವಕರೊಂದಿಗೆ ದುಡಿಯಲು ಗುರು ಹಿರಿಯರು ಹಾಗೂ ಯತಿವರ್ಯರ ಸಲಹೆ ಸೂಚನೆಯಂತೆ ವಾಲ್ಮೀಕಿ ಯುವ ವೇದಿಕೆಯನ್ನು ಬಲವಾಗಿ ಕಟ್ಟಲು ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದೇನೆ. ಯುವಕರನ್ನು ಒಗ್ಗೂಡಿಸುವ ಮೂಲಕ ಸಮುದಾಯಕ್ಕೆ ಸೇವೆಯನ್ನು ಸಲ್ಲಿಸುತ್ತೇನೆ ಎಂದರು.
ನರಸೀಪುರ ಸೇರಿದಂತೆ ಜಿಲ್ಲೆಯ ತಾಲೂಕುಗಳಲ್ಲಿ ಸಂಘಟನೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಪ್ರಗತಿಪರ ಸಂಘಟನೆಗಳ ಮುಖಂಡರ ಸಲಹೆ ಪಡೆದುಕೊಂಡು ಎಲ್ಲಾ ಸಮುದಾಯಗಳ ಜನರ ವಿಶ್ವಾಸ ಗಳಿಸಿ ವಾಲ್ಮೀಕಿ ಯುವ ವೇದಿಕೆಯನ್ನು ಉತ್ತಮ ಸಂಘಟನೆಯಾಗಿ ರೂಪಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಡೈರಿ ನಾಗರಾಜು, ರಾಚನಾಯಕ, ಶಾಂತರಾಜು, ಸಿದ್ದರಾಜು, ನಿಂಗನಾಯಕ, ರಾಜೇಂದ್ರ, ಶೇಖರ, ನಾಗೇಶ್, ಚಿಕ್ಕರಾಚ, ಪ್ರಸನ್ನ ಮತ್ತಿತರರು ಹಾಜರಿದ್ದರು.