ಕರ್ನಾಟಕ ಮುಕ್ತ ವಿವಿಯಲ್ಲಿ ವಿವಿಧ ಅಕ್ರಮ ಪ್ರಕರಣ ಮೂವರು ವಿಶ್ರಾಂತ ಕುಲಪತಿ, ಮೂವರು ಮಾಜಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಮೈಸೂರು

ಕರ್ನಾಟಕ ಮುಕ್ತ ವಿವಿಯಲ್ಲಿ ವಿವಿಧ ಅಕ್ರಮ ಪ್ರಕರಣ ಮೂವರು ವಿಶ್ರಾಂತ ಕುಲಪತಿ, ಮೂವರು ಮಾಜಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

December 21, 2019

ಮೈಸೂರು,ಡಿ.20(ಎಸಿಪಿ)-ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಓಯು)ದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮೈಸೂರಿನ ಜಯ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಡಿ.17ರಂದು ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಒಂದು ಪ್ರಕರಣದಲ್ಲಿ (ಎಫ್‍ಐಆರ್ ಸಂಖ್ಯೆ 53/2019) ಮುಕ್ತ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಂ.ಜಿ.ಕೃಷ್ಣನ್, ಮಾಜಿ ಕುಲಸಚಿವರಾದ ಪ್ರೊ.ಬಿ.ಎಸ್.ವಿಶ್ವನಾಥ್, ಪ್ರೊ. ಪಿ.ಎಸ್.ನಾಯಕ್ ಮತ್ತು ಮುಕ್ತ ವಿವಿಯ ಮಾಜಿ ಐಟಿ ಡೈರೆಕ್ಟರ್ ಕಮಲೇಶ್ ಅವರುಗಳು ಆರೋಪಿಗ ಳಾಗಿದ್ದರೆ, ಮತ್ತೊಂದು ಪ್ರಕರಣದಲ್ಲಿ (ಎಫ್‍ಐಆರ್ ಸಂಖ್ಯೆ 54/2019) ಮುಕ್ತ ವಿವಿಯ ವಿಶ್ರಾಂತ ಕುಲ ಪತಿ ಪ್ರೊ.ಕೆ.ಸುಧಾರಾವ್ ಆರೋಪಿಯಾಗಿದ್ದಾರೆ. ಇವರೆಲ್ಲರ ವಿರುದ್ಧ ಭಾರತೀಯ ದಂಡ ಸಂಹಿತೆ 406, 409, 420, 34ರಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳನ್ನು ನಿವೃತ್ತ ನ್ಯಾಯಮೂರ್ತಿ ಡಾ. ಬಿ.ಭಕ್ತವತ್ಸಲ ಅವರ ವರದಿಯಂತೆ ದಾಖಲಿಸಲಾಗಿದೆ.

2010ರ ಡಿಸೆಂಬರ್ 16ರಿಂದ 2015ರ ಅಕ್ಟೋ ಬರ್ 23ರವರೆಗೆ ಅಕ್ರಮಗಳು ನಡೆದಿವೆ ಎಂದು ಮೊದಲನೇ ಪ್ರಕರಣದಲ್ಲಿ ಆರೋಪಿಸಲಾಗಿದೆ. ಪ್ರೊ. ಕೆ.ಎಸ್.ರಂಗಪ್ಪ ಮತ್ತು ಪ್ರೊ. ಎಂ.ಜಿ.ಕೃಷ್ಣನ್ ಕುಲಪತಿಗಳಾಗಿದ್ದ ಅವಧಿಯಲ್ಲಿ ತಾಂತ್ರಿಕ ಮತ್ತು ತಾಂತ್ರಿಕವಲ್ಲದ ಕೋರ್ಸ್‍ಗಳಿಗೆ ಮುಂಬೈನ ಐಇಎಂ ಸಂಸ್ಥೆಯೊಂದಿಗೆ ನಿಯಮ ಬಾಹಿರವಾಗಿ 2010ರ ಡಿ.16, 2011ರ ಫೆ.14, ಡಿ.5, 2012ರ ನ.26 ಮತ್ತು 2015ರ ಅ.23ರಂದು ನಿಯಮ ಬಾಹಿರವಾಗಿ ಹಲವಾರು ಒಪ್ಪಂದಗಳನ್ನು (ಎಂಓಯು) ಮಾಡಿಕೊ ಳ್ಳಲಾಗಿದೆ. ಈ ಅವಧಿಯಲ್ಲಿ ಪ್ರೊ. ಬಿ.ಎಸ್.ವಿಶ್ವನಾಥ್ ಮತ್ತು ಪ್ರೊ. ಪಿ.ಎಸ್.ನಾಯಕ್ ಕುಲಸಚಿವರಾಗಿದ್ದು, ಕಮಲೇಶ್ ಅವರು ಐಟಿ ನಿರ್ದೇಶಕರಾಗಿದ್ದರು. ಇವರೆಲ್ಲರೂ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಒಪ್ಪಂದಗಳ ಪ್ರಕಾರ ಒಬ್ಬ ವಿದ್ಯಾರ್ಥಿಗೆ 270 ರೂ.ಗಳನ್ನು ನಿಗದಿಪಡಿಸಲಾಗಿರುತ್ತದೆ. ಅದರಂತೆ 2012ರ ಅಕ್ಟೋಬರ್ 31ರಂದು 1 ಕೋಟಿ ರೂ. ಗಳನ್ನು ಐಇಎಂ ಸಂಸ್ಥೆಗೆ ಮುಕ್ತ ವಿವಿಯಿಂದ ನೀಡ ಲಾಗಿದೆ. ಅದಕ್ಕೆ ಅಂದಿನ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅನುಮೋದನೆ ನೀಡಿದ್ದು, ಕುಲಸಚಿವರಾಗಿದ್ದ ಪ್ರೊ. ಬಿ.ಎಸ್.ವಿಶ್ವನಾಥ್ ಸಹಿ ಮಾಡಿದ್ದಾರೆ. ಅದನ್ನು ಆಡಳಿತ ಮಂಡಳಿಯು 2012ರ ನ.21ರಂದು ಮಂಜೂರು ಮಾಡಿದೆ. ಐಇಎಂ ಸಂಸ್ಥೆಯೊಂದಿಗಿನ ಇಂಟಿಗ್ರೇಟೆಡ್ ವೆಬ್ ಬೇಸ್ಡ್ ಸಿಸ್ಟಂ ಟೆಂಡರ್ ಮಾಡುವ ಸಮಯದಲ್ಲಿ ಮತ್ತು ಕಾರ್ಯಾದೇಶವನ್ನು ಕಾರ್ಯ ಗತಗೊಳಿಸುವ ಸಮಯದಲ್ಲಿ ಕಮಲೇಶ್ ಐಟಿ ವಿಭಾಗದ ಪ್ರಭಾರ ನಿರ್ದೇಶಕರಾಗಿದ್ದರು. ಇವರೆಲ್ಲರೂ ಐಇಎಂ ಸಂಸ್ಥೆಯೊಂದಿಗೆ ಸೇರಿ ಮೋಸ ಮತ್ತು ವಂಚನೆ ಯಿಂದ ವಿವಿಗೆ ಮತ್ತು ಸಾರ್ವಜನಿಕ ಬಂಡವಾಳಕ್ಕೆ ವಂಚಿಸಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮತ್ತೊಂದು ಪ್ರಕರಣವು 2003ರ ಜೂನ್ 26ರಿಂದ 2007ರ ಜೂನ್ 25ರವರೆಗೆ ನಡೆದಿದೆ ಎಂದು ಆರೋ ಪಿಸಲಾಗಿದ್ದು, ಆಗ ಮುಕ್ತ ವಿವಿ ಕುಲಪತಿಗಳಾಗಿದ್ದ ಪ್ರೊ. ಕೆ.ಸುಧಾರಾವ್ ಅವರು ಹಲವಾರು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು, ಸಂಘಗಳು, ಟ್ರಸ್ಟ್‍ಗಳು, ಖಾಸಗಿ ನಿಗಮ ನಿಯಮಿತಗಳು, ಸರ್ಕಾರದಿಂದ ಕಾನೂನಾತ್ಮಕ ಸಲಹೆ ಪಡೆಯದೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಬಗ್ಗೆ ಎಂಓಯುನೊಂದಿಗೆ ದೋಷಪೂರಿತ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ಅವಧಿಯಲ್ಲಿ 155 ಎಂಓಯುಗಳಿಗೆ ಕುಲಾಧಿಪತಿಗಳ ಅನುಮೋದನೆ ಪಡೆಯುವುದಕ್ಕಿಂತ ಮುಂಚೆಯೇ ಸಹಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Translate »