ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ವಸಂತ ನವರಾತ್ರಿ ಪೂಜೆ ಸಮಾಪ್ತಿ
ಮೈಸೂರು

ಚಾಮುಂಡೇಶ್ವರಿ ದೇವಸ್ಥಾನದಲ್ಲಿ  ವಸಂತ ನವರಾತ್ರಿ ಪೂಜೆ ಸಮಾಪ್ತಿ

April 9, 2020

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು  ದಿನಗಳ ಪೂಜೆಗೆ ಅರ್ಚಕರಿಗಷ್ಟೇ ಅವಕಾಶ

ಮೈಸೂರು,ಏ.8(ಎಂಟಿವೈ)- ಲಾಕ್‍ಡೌನ್ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 3 ದಿನಗಳಿಂದ ನೆರವೇರುತ್ತಿದ್ದ `ವಸಂತ ನವರಾತ್ರಿ ಪೂಜೆ’ ಬುಧವಾರ ಸಮಾಪ್ತಿಯಾಯಿತು.

ಪ್ರತಿವರ್ಷವೂ ಸಂಪ್ರದಾಯದಂತೆ ಲೋಕ ಕಲ್ಯಾಣಕ್ಕೆ ಹಾಗೂ ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ 3 ದಿನ ವಸಂತ ನವರಾತ್ರಿ ಪೂಜೆ ನಡೆಸುವ ಪದ್ಧತಿ ಇದೆ. ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಆಗಮಿಕ ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ 3 ದಿನಗಳಿಂದ ವಿಶೇಷ ಪೂಜೆ ಜರುಗುತ್ತಿತ್ತು. ಮಂಗಳವಾರದ ಪೂಜೆ ಮೂಲಕ ಚೈತ್ರ ಮಾಸದ ವಸಂತ ನವರಾತ್ರಿ ಪೂಜೆ, ತ್ರಯೋದಶಿ, ಚತುರ್ದಶಿ ಪೌರ್ಣಮಿ ಮುಕ್ತಾಯಗೊಳಿಸಲಾಯಿತು.

ಕೊರೊನಾ ಭೀತಿಯಿಂದಾಗಿ ಭಕ್ತರ ಹಾಜರಿಗೆ ಅವಕಾಶ ನೀಡದೆ ಕೇವಲ ಅರ್ಚಕರು ಹಾಗೂ ದೇವಾಲಯದ ಸಿಬ್ಬಂದಿ ಮೂರೂ ದಿನ ಪೂಜಾ ಕೈಂಕರ್ಯ ನಡೆಸಿದರು. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಶಶಿಶೇಖರ್ ದೀಕ್ಷಿತ್, ಪ್ರತಿವರ್ಷ ನವರಾತ್ರಿ ಪೂಜೆ ವಿಜೃಂಭಣೆಯಿಂದ ನಡೆಯು ತ್ತಿತ್ತು. ಈ ಬಾರಿ ಲಾಕ್‍ಡೌನ್‍ನಿಂದಾಗಿ ಸಾಂಪ್ರದಾಯಿಕವಾಗಿ ಪೂಜೆ ನಡೆಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗಿದೆ. ಬೆಳಿಗ್ಗೆ 6ರಿಂದಲೇ ನಾಡದೇವಿಗೆ ಪಂಚಾ ಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿದ ನಂತರ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಬೆಳಿಗ್ಗೆ 7.30ಕ್ಕೆ ದೇವಾಲಯದ ಬಾಗಿಲು ತೆರೆದು ಮಹಾಮಂಗಳಾರತಿ ಬೆಳಗಿ, ನಿತ್ಯ ಪೂಜೆ ನೆರವೇರಿಸಿದ ನಂತರ ಬಾಗಿಲು ಮುಚ್ಚಲಾಯಿತು. ಮತ್ತೆ ಸಂಜೆ 6ಕ್ಕೆ ಬಾಗಿಲು ತೆರೆದು 7.30ರವರೆಗೆ ನಿತ್ಯ ಪೂಜೆ ಸಲ್ಲಿಸಿ ನಂತರ ದೇವಾಲಯವನ್ನು ಬಂದ್ ಮಾಡಲಾಯಿತು ಎಂದರು.

ಲಾಕ್‍ಡೌನ್‍ನಿಂದಾಗಿ ದೇವಾಲಯ ಬಂದ್ ಮಾಡಲಾಗಿದ್ದು, ಭಕ್ತರು ಮನೆಯ ಲ್ಲಿಯೇ ದೇವರನ್ನು ಆರಾಧಿಸಲಿ. ಯಾವುದೇ ಕಾರಣಕ್ಕೂ ದೇವಾಲಯದತ್ತ ಬರಬಾರದು. ನಾಡಿಗೆ ಎದುರಾಗಿರುವ ಸಂಕಷ್ಟ ನಿವಾರಣೆಗಾಗಿ ಪ್ರತಿದಿನವೂ 2 ಬಾರಿ ಸಮಸ್ತ ಜನರ ಪರವಾಗಿ ದೇವಿಗೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

 

 

 

Translate »