ವಿಶ್ವಪ್ರಜ್ಞ ಕಾಲೇಜಿನಲ್ಲಿ  ‘ವಸುಂಧರೆ’ ಇಕೋ ಕ್ಲಬ್ ಉದ್ಘಾಟನೆ
ಮೈಸೂರು

ವಿಶ್ವಪ್ರಜ್ಞ ಕಾಲೇಜಿನಲ್ಲಿ  ‘ವಸುಂಧರೆ’ ಇಕೋ ಕ್ಲಬ್ ಉದ್ಘಾಟನೆ

August 19, 2018

ಮೈಸೂರು: ನಗರದ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ‘ವಸುಂಧರೆ’ ಇಕೋ ಕ್ಲಬ್-2018ರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಜಿ.ಆರ್.ನಾಗರಾಜರವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡುತ್ತಾ, ನಮ್ಮ ದೇಶದಲ್ಲಿ ಪರಿಸರ ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಇಂದು ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಪರಿಸರ ಮಾಲಿನ್ಯ ತಡೆಗಟ್ಟುವುದರೊಂದಿಗೆ ಪರಿಸರ ಶುಚಿತ್ವವು ನಮ್ಮಿಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಮನುಷ್ಯ ಇಂದು ಸ್ವಾರ್ಥ, ದುರಾಸೆಯಿಂದ ಬಹುಬೇಗನೆ ಹಣ ಗಳಿಸುವ ಉದ್ದೇಶದಿಂದ ತನಗೆ ಬೇಕಾದ ರೀತಿಯಲ್ಲಿ ಪರಿಸರವನ್ನು ನಾಶ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಹೊರಟಿದ್ದಾನೆ. ಅದರ ಫಲವಾಗಿಯೇ ಇಂದು ಹವಮಾನದಲ್ಲಿ ವೈಪರಿತ್ಯಗೊಂಡು ಮಿತಿ ಮೀರಿದ ಬಿಸಿಲು, ಮಳೆ, ಚಳಿ ಹಾಗೂ ಅಕಾಲಿಕ ಮಳೆ, ಪ್ರವಾಹ, ಬರಗಾಲದಂತಹ ಅತಿವೃಷ್ಠಿ, ಅನಾವೃಷ್ಠಿ ವಿಕೋಪಗಳನ್ನು ನಾವು ಅನುಭವಿಸುವಂತಾಗಿದೆ. ನಾವಿದನ್ನು ಹೀಗೆಯೇ ಮುಂದುವರಿಸಿದರೆ, ಈ ಭೂಮಿಯ ಮೇಲೆ ಯಾರಿಗೂ ಹೆಚ್ಚು ಕಾಲ ಉಳಿಗಾಲವಿಲ್ಲ. ಆದ್ದರಿಂದ ಈ ಪರಿಸರವನ್ನು ಸಂರಕ್ಷಿಸಿ, ಪೋಷಿಸಿಕೊಂಡು ನಿಸರ್ಗವನ್ನು ಸಮತೋಲನದಲ್ಲಿರಿಸಿ, ಪ್ರಕೃತಿ ವಿಕೋಪ ಮತ್ತು ವೈಪರೀತ್ಯಗಳಾಗದಂತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆಯಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಜಯ ವಿಠ್ಠಲ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡುತ್ತಾ, ಸಂಸ್ಕøತದಲ್ಲಿ ಒಂದು ಮಾತಿದೆ ‘ವೃಕ್ಷೋ ರಕ್ಷತಿ ರಕ್ಷಿತಃ’ ಅಂದರೆ ನಾವು ವೃಕ್ಷಗಳನ್ನು ಕಾಪಾಡಿದರೆ ವೃಕ್ಷ ನಮ್ಮನ್ನು ಕಾಪಾಡುತ್ತದೆ. ನಮ್ಮ ಸುತ್ತಲಿನ ಪರಿಸರ ಆರೋಗ್ಯಕರವಾಗಿದ್ದರೆ, ಮನುಷ್ಯ ಹಾಗೂ ಪ್ರಾಣಿಗಳು ಸುರಕ್ಷಿತವಾಗಿರುತ್ತವೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿಯಾದ ವಿಶ್ವನಾಥ್ ಶೇಷಾಚಲರವರು ಮಾತನಾಡುತ್ತಾ, ಪರಿಸರ ಜಾಗೃತಿಯನ್ನು ಪ್ರತಿಯೊಬ್ಬರೂ ಹೊಂದಿಕೊಳ್ಳಬೇಕು ಎಂಬುದನ್ನು ನಮಗೆ ಇಂದಿನ ಪ್ರಕೃತಿ ವಿಕೋಪಗಳ ಮೂಲಕ ಪರಿಸರವೇ ನಮಗೆ ತಿಳಿಸುತ್ತಿದೆ. ನಿಸರ್ಗವನ್ನು ತುಂಬಾ ಕೀಳಾಗಿ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳದೆ, ನಿಸರ್ಗವನ್ನು ಪ್ರೀತಿಸುವ ಹಾಗೂ ಪೋಷಿಸುವ ಕಾರ್ಯವನ್ನು ಮಾಡಬೇಕು. ನಿಮ್ಮಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಸಲುವಾಗಿ ನಾವು ಇಕೋ ಕ್ಲಬ್‍ನ್ನು ಉದ್ಘಾಟಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಇಕೋ ಕ್ಲಬ್‍ನ ವಿದ್ಯಾರ್ಥಿ ಪದಾಧಿಕಾರಿಗಳಾಗಿ ಅಧ್ಯಕ್ಷೆಯಾಗಿ ಶರಣ್ಯ ಕೊನರಿ ಹಾಗೂ ಕಾರ್ಯದರ್ಶಿಯಾಗಿ ಭವೀಶ್ ಚೆಂಗಪ್ಪ ಇವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಕಾಲೇಜಿನ ಖಜಾಂಜಿ ಎಸ್.ಮನೋಹರ್, ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಪ್ರಾಂಶುಪಾಲರಾದ ರಚನ್ ಅಪ್ಪಣಮಯ್ಯ ಉಪಸ್ಥಿತರಿದ್ದರು.

Translate »