ಕೊಡಗಿನ ಜನರ ರಕ್ಷಣೆಗಾಗಿ ಸಚಿವರ ಮುಂದೆ ಕಣ್ಣೀರಿಟ್ಟ ವೀಣಾ ಅಚ್ಚಯ್ಯ
ಕೊಡಗು

ಕೊಡಗಿನ ಜನರ ರಕ್ಷಣೆಗಾಗಿ ಸಚಿವರ ಮುಂದೆ ಕಣ್ಣೀರಿಟ್ಟ ವೀಣಾ ಅಚ್ಚಯ್ಯ

August 18, 2018

ಮಡಿಕೇರಿ: ಸಂಕಷ್ಟದಲ್ಲಿ ಸಿಲುಕಿರುವ ಕೊಡಗಿನ ಜನರನ್ನು ರಕ್ಷಿಸಿ ಎಂದು ಸಚಿವರ ಮುಂದೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕಣ್ಣೀರಿಟ್ಟರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಇಂದು ಅಧಿ ಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ ಸಂದರ್ಭದಲ್ಲಿ ವೀಣಾ ಅಚ್ಚಯ್ಯ ಅವರು, ಮಳೆ ಅನಾಹುತದಿಂದ ಕೊಡಗಿನ ಜನರು ಪಡುತ್ತಿರುವ ಕಷ್ಟಗಳನ್ನು ವಿವರಿಸಿದರಲ್ಲದೇ, ರಕ್ಷಣಾ ಕಾರ್ಯ ಸಮರ್ಪಕವಾಗಿ ನಡೆಯದೇ
ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ಜನರನ್ನು ರಕ್ಷಿಸುವಂತೆ ಕಣ್ಣೀರಿಟ್ಟರು. ಗುಡ್ಡದ ಮೇಲೆ ನೂರಾರು ಜನರು ಆಶ್ರಯ ಪಡೆದಿದ್ದಾರೆ. ಅವರನ್ನು ರಕ್ಷಿಸಿ ಕರೆತರುವ ಕೆಲಸ ಆಗುತ್ತಿಲ್ಲ. ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಹೆಲಿಕಾಪ್ಟರ್ ಬರುತ್ತದೆ ಎಂದು ನಿನ್ನೆಯಿಂದ ಹೇಳುತ್ತಿದ್ದೀರಿ. ಎಲ್ಲಿ ಹೆಲಿಕಾಪ್ಟರ್? ಒಂದು ಸಲ ಹೆಲಿಕಾಪ್ಟರ್ ಬಂದಿತ್ತು. ತಮ್ಮನ್ನು ರಕ್ಷಿಸುವಂತೆ ಜನ ಗೋಗರೆಯುತ್ತಿದ್ದರೂ ಅವರ ಸಮೀಪಕ್ಕೂ ಸಹ ಹೋಗದೇ ಹೆಲಿಕಾಪ್ಟರ್ ವಾಪಸ್ ಹೋಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈಗ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರು ಯಾರನ್ನೂ ಸರಿಯಾಗಿ ರಕ್ಷಣೆ ಮಾಡುತ್ತಿಲ್ಲ. ಇಂತಹ ತಂಡ ನಮಗೆ ಬೇಡ. ಎಷ್ಟೋ ಜನರನ್ನು ಕೊಡಗಿನ ನಮ್ಮ ಜನರೇ ರಕ್ಷಿಸಿದ್ದಾರೆ. ಆದ್ದರಿಂದ ದಯವಿಟ್ಟು ಕೇಂದ್ರ ವಿಪತ್ತು ನಿರ್ವಹಣಾ ಪಡೆ ಕರೆಸಿ, ಜನರನ್ನು ರಕ್ಷಿಸಿ ಎಂದು ಅವರು ಮನವಿ ಮಾಡಿದರು.

Translate »