‘ಕೈ’ ಬಿಟ್ಟು ಸಿಹೆಚ್‍ವಿ ಮರಳಿ ತವರಿಗೆ: ಇಂದು ಮೈಸೂರು ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿ ಮಾಡಲಿರುವ ವಿಜಯಶಂಕರ್
ಮೈಸೂರು

‘ಕೈ’ ಬಿಟ್ಟು ಸಿಹೆಚ್‍ವಿ ಮರಳಿ ತವರಿಗೆ: ಇಂದು ಮೈಸೂರು ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಭೇಟಿ ಮಾಡಲಿರುವ ವಿಜಯಶಂಕರ್

October 24, 2019

ಮೈಸೂರು, ಅ.23- ವರ್ಷದ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದ ಮಾಜಿ ಸಚಿವರೂ ಆದ ಸಿ.ಹೆಚ್.ವಿಜಯಶಂಕರ್ ಮತ್ತೆ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದಾರೆ. ಇವರನ್ನು ಬಿಜೆಪಿಗೆ ಮತ್ತೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮುಖಂಡರಾದ ಅರವಿಂದ ಲಿಂಬಾವಳಿ, ರವಿಕುಮಾರ್ ಇತರರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮೈಸೂರಿಗೆ ಭೇಟಿ ನೀಡುತ್ತಿರುವ ಕಟೀಲ್ ಅವರನ್ನು ಸಿ.ಹೆಚ್.ವಿಜಯ ಶಂಕರ್ ಪಕ್ಷದ ಕಚೇರಿಯಲ್ಲಿ ಭೇಟಿ ಮಾಡುತ್ತಿದ್ದಾರೆ.

ಹುಣಸೂರು ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ಮೈಸೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ ವಿಜಯಶಂಕರ್ ಪಕ್ಷ ಸೇರ್ಪಡೆ ವಿಷಯವೂ ಪ್ರಸ್ತಾಪವಾಗಲಿದೆ. ಮಧ್ಯಾಹ್ನ 3 ಗಂಟೆಗೆ ಪಕ್ಷದ ಗ್ರಾಮಾಂತರ ಘಟಕದ ಸಭೆಯನ್ನು ಏರ್ಪಡಿಸಲಾಗಿದೆ. ನಂತರ ಸಂಜೆ 5 ಗಂಟೆಗೆ ನಗರ ಘಟಕದ ಮುಖಂಡರ ಸಭೆಯೂ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಸಭೆ: ಹುಣಸೂರು ವಿಧಾನಸಭಾ ಉಪ ಚುನಾವಣೆ ಸಂಬಂಧ ಇಂದು ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಬಿಜೆಪಿ ಮುಖಂಡರ ಸಭೆ ನಡೆಯಿತು. ಈ ಸಭೆಯಲ್ಲಿ ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸ ಬೇಕು? ಪ್ರಚಾರ ಕಾರ್ಯತಂತ್ರವೇನು? ಪಕ್ಷದ ಅಭ್ಯರ್ಥಿ ಗೆಲುವಿಗೆ ಏನೆಲ್ಲಾ ಕಾರ್ಯತಂತ್ರ ರೂಪಿಸಬೇಕು ಇತ್ಯಾದಿ ವಿಷಯಗಳನ್ನು ಗಂಭೀರವಾಗಿ ಚರ್ಚಿಸಲಾಯಿತು. ಇದೇ ವೇಳೆ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿ ಕೊಳ್ಳುವ ವಿಷಯವೂ ಪ್ರಸ್ತಾಪವಾಯಿತು. ಈ ವಿಚಾರದಲ್ಲಿ ಎಲ್ಲಾ ಮುಖಂಡರು ಸಹಮತ ವ್ಯಕ್ತಪಡಿಸಿದರು ಎಂದು ಎಂ.ಶಿವಣ್ಣ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಹುಣಸೂರು ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವು ಹಾಗೂ ಪಕ್ಷ ಸಂಘಟನೆಯ ಸಂಬಂಧ ಹೆಚ್ಚಿನ ಚರ್ಚೆ ನಡೆಯಿತು. ಹಲವಾರು ವರ್ಷಗಳಿಂದ ಪಕ್ಷಕ್ಕೆ ನಿಷ್ಟರಾಗಿ ದುಡಿದ ಸಿ.ಹೆಚ್.ವಿಜಯಶಂಕರ್ ಮತ್ತೆ ಪಕ್ಷಕ್ಕೆ ಮರಳುವುದಾದರೆ, ಅವಕಾಶ ಕಲ್ಪಿಸಬೇಕು ಎಂಬ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಶಿವಣ್ಣ ಹೇಳಿದರು.

Translate »