ರಾಜಕೀಯ ದುರುದ್ದೇಶಪೂರಿತ ಆರೋಪಗಳ ಅಲ್ಲಗಳೆದ ವಿಜಯೇಂದ್ರ
ಮೈಸೂರು

ರಾಜಕೀಯ ದುರುದ್ದೇಶಪೂರಿತ ಆರೋಪಗಳ ಅಲ್ಲಗಳೆದ ವಿಜಯೇಂದ್ರ

September 13, 2019

ಮೈಸೂರು,ಸೆ.12-ತಾನು ಮುಖ್ಯಮಂತ್ರಿಗಳ ಪುತ್ರ ಎಂಬ ಒಂದೇ ಕಾರಣಕ್ಕಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ದುರುದ್ದೇಶದಿಂದ ತನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರೂ ಆದ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

`ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಒಂದು ವಿನಮ್ರ ನಿವೇದನೆ’ ಶೀರ್ಷಿಕೆಯಡಿ ಪತ್ರಿಕಾ ಪ್ರಕಟಣೆ ನೀಡಿ ರುವ ಅವರು, ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಮತ್ತು ನನ್ನ ರಾಜಕೀಯ ಏಳಿಗೆಗೆ ತಡೆಯೊಡ್ಡಬೇಕೆಂಬ ಷಡ್ಯಂತ್ರದಿಂದಾಗಿ ಸರ್ಕಾರದ ಆಡಳಿತ ಹಾಗೂ ವರ್ಗಾವಣೆ ಪ್ರಕ್ರಿಯೆಯಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂದು ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅಧಿಕಾರ ಮತ್ತು ರಾಜಕಾರಣದಲ್ಲಿ ಮೂಗು ತೂರಿಸುವ ಅನಿವಾರ್ಯತೆ ನನಗಿಲ್ಲ. ಆದರೆ ನನ್ನಲ್ಲಿ ನಿವೇದನೆ ಮಾಡಿಕೊಳ್ಳಲು ಬರುವ ಬಡವರ, ಜನಸಾಮಾನ್ಯರ ಹಾಗೂ ಕಾರ್ಯ ಕರ್ತರ ನಿರೀಕ್ಷೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ನನ್ನ ಕರ್ತವ್ಯವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆ ಗೊಂಡು, ತಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಅವರ ಹೋರಾಟದ ಬದುಕನ್ನು ಆದರ್ಶವಾಗಿಟ್ಟು ಕೊಂಡು ಸಾರ್ವಜನಿಕ ಕ್ಷೇತ್ರದಲ್ಲಿ ಸಾರ್ಥಕ ಹೆಜ್ಜೆ ಇಡಬೇಕೆಂಬ ಹಂಬಲದಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡು ಯುವ ಸಮು ದಾಯದಲ್ಲಿ ಆತ್ಮವಿಶ್ವಾಸ ತುಂಬಿ ರಾಷ್ಟ್ರ ಕಟ್ಟುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರು ವುದಾಗಿ ವಿಜಯೇಂದ್ರ ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾನು ಕುಟುಂಬ ರಾಜಕಾರಣದಿಂದ ಪ್ರೇರಿತನಾಗಿ ರಾಜಕೀಯ ಪ್ರವೇಶಿಸಿಲ್ಲ ಎಂದಿರುವ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ವಿಭಾಗದ ಜನರ ಪ್ರೀತಿಯ ಬಂಧನಕ್ಕೆ ತಲೆಬಾಗಿ, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸಾರ್ವಜನಿಕ ಕ್ಷೇತ್ರಕ್ಕೆ ಅಡಿಯಿಡಬೇಕಾದ ಅನಿರೀಕ್ಷಿತ ಬೆಳವಣಿ ಗೆಯು ತಾನು ರಾಜಕೀಯ ಪ್ರವೇ ಶಿಸಬೇಕಾದ ಪರಿಸ್ಥಿತಿಗೆ ಕಾರಣವಾಯಿತು. ಚುನಾವಣಾ ರಾಜಕೀಯಕ್ಕೆ ಮುನ್ನ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ವರಿಷ್ಠರು ನೀಡಿದ ಸೂಚನೆ ಯನ್ವಯ ಇಡೀ ರಾಜ್ಯದಲ್ಲಿ ಸಂಚರಿಸಿ ಪಕ್ಷ ಕಟ್ಟುವ ಕಾಯಕದಲ್ಲಿ ನಿರತನಾ ಗಿದ್ದೇನೆಯೇ ಹೊರತು, ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಅನಿರೀಕ್ಷಿತವಾಗಿ ನಾಡಿಗೆ ಎರಗಿದ ನೆರೆ ಹಾವಳಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಅನೇಕರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಊರು-ಕೇರಿಗಳು ತನ್ನ ಮೂಲ ಸ್ವರೂಪ ಕಳೆದುಕೊಂಡು ದಿಕ್ಕೆಟ್ಟು ಹೋಗಿವೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಹಗಲಿರುಳೆನ್ನದೆ ಶ್ರಮಿಸುತ್ತಿದೆ. ಇದರ ಜೊತೆ-ಜೊತೆಗೆ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ಕ್ರಿಯಾಶೀಲವಾಗಿ ಕಾರ್ಯ ನಿರ್ವ ಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಹೆಜ್ಜೆಯೊಂದಿಗೆ ಹೆಜ್ಜೆ ಇರಿಸಿ ಸಹಕಾರ ನೀಡಬೇಕಾದ ಕೆಲವು ಶಕ್ತಿಗಳು ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟು ಕೊಂಡು ಕಪೋಲ ಕಲ್ಪಿತವಾದ ಸುದ್ದಿಗಳನ್ನು ಹರಡುವುದರಲ್ಲಿ ನಿರತವಾಗಿರುವುದು ಲಜ್ಜೆಗೇಡಿ ರಾಜಕಾರಣದ ಪರಮಾವಧಿ. ನಾಡು ಸಮೃದ್ಧ ಗೊಳಿಸುವ ಮೂಲಕ ಪ್ರಧಾನಿ ಮೋದಿಯವರ ಬಲಿಷ್ಠ ಭಾರತ ಕಟ್ಟುವ ಯೋಜನೆಗೆ ಮಹತ್ವದ ಕೊಡುಗೆ ನೀಡುವ ಛಲ ಹೊತ್ತು ದಣಿವರಿಯದ ದಕ್ಷ ಆಡಳಿತ ನೀಡುತ್ತಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಅಪಖ್ಯಾತಿ ತರಬೇಕೆಂಬ ಹತಾಶೆ ಮನಸುಗಳು ಅಪಪ್ರಚಾರದ ಮುಂಚೂಣಿಯಲ್ಲಿರುವುದು ದುರ್ದೈವ ಎಂದು ಅವರು ಹೇಳಿದ್ದಾರೆ.

ಬಿಜೆಪಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಹಾಗೂ ಸಮಾಜದ ಸರ್ವ ವರ್ಗಗಳ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ನಮ್ಮ ಉತ್ಸಾಹವನ್ನು ಯಾರೂ ಕುಗ್ಗಿಸಲಾಗದು. ಎದುರಾಗುವ ಟೀಕೆ, ಸುಳ್ಳು ವದಂತಿಗಳಿಗೆ ಯಾವುದೇ ಮಾನ್ಯತೆ ನೀಡದೇ ನಾನು ನಂಬಿರುವ ಪಕ್ಷದ ಸಿದ್ಧಾಂತ, ತತ್ವಗಳಿಗೆ ಬದ್ಧನಾಗಿ ಯಡಿಯೂರಪ್ಪ ಅವರು ಸವೆಸಿದ ಹಾದಿಯಲ್ಲಿ ಸಮಾಜ ಸೇವೆಗೆ ನನ್ನನ್ನು ಸಮರ್ಪಿಸಿಕೊಂಡು ಮುನ್ನಡೆಯಲು ನಿಮ್ಮ ಆಶೀರ್ವಾದ ನಿರೀಕ್ಷಿಸುತ್ತೇನೆ ಎಂದು ವಿಜ ಯೇಂದ್ರ ತಿಳಿಸಿದ್ದಾರೆ.

Translate »