ವಿರಾಜಪೇಟೆ: ಮನುಷ್ಯನ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುವುದರಿಂದ 18 ವಯಸ್ಸಿನ ಮೇಲ್ಪಟ್ಟ ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವವನ್ನು ಉಳಿಸಬೇಕಾಗಿದೆ ಎಂದು ಭಾರತ ಸ್ಕೌಟ್ಸ್-ಗೈಡ್ಸ್‍ನ ಜಿಲ್ಲಾ ಪ್ರದಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ ಹೇಳಿದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯುವ ರೆಡ್‍ಕ್ರಾಸ್ ಘಟಕ, ರೋವರ್ಸ್ ಆಂಡ್ ರೇಂಜರ್ಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ರಕ್ತದಾನ ಶಿಬಿರ’ದಲ್ಲಿ ಕಿಟ್ಟು ಕಾಳಪ್ಪ ಮಾತನಾಡಿ, ನಾನು ನನ್ನದು ಎಂಬುದನ್ನು ಬಿಟ್ಟು ರಕ್ತದಾನದಂತಹ ಸೇವೆ ಮಾಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿ ಕೊಳ್ಳುವಂತಾ ಗಬೇಕು ಎಂದರು. ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿ ಕಾರಿ ಡಾ,ರವಿ ಕರುಂಬಯ್ಯ ಮಾತನಾಡಿ, 18 ವಯಸ್ಸು ಮೇಲ್ಪಟ್ಟ ಯುವಕರುಗಳು 60 ವರ್ಷದವರೆಗೂ ರಕ್ತದಾನ ಮಾಡಬಹುದು.
ವಾಹನಗಳಲ್ಲಿ ಸಂಚರಿಸುವ ಸಂದರ್ಭ ದುರ್ಘಟನೆಗಳು ನಡೆದಾಗ ಜೀವ ಉಳಿಸಲು ಮೊದಲು ಬೇಕಾಗುವುದು ರಕ್ತ. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಯಾಗುತ್ತದೆ ಎಂದು ತಿಳಿಸಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಕೆ.ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಸತೀಶ್, ರುದ್ರ, ಪೊನ್ನಪ್ಪ ಇತರರು ಉಪಸ್ಥಿತರಿದ್ದರು. ರೋವರ್ಸ್ ಆಂಡ್ ರೇಂಜರ್ಸ್‍ನ ಎಂ.ಎನ್.ವನಿತ್ ಕುಮಾರ್ ಸ್ವಾಗತಿಸಿದರು.