ಮೈಸೂರು, ಸೆ.18(ಆರ್‍ಕೆಬಿ)- ನಟ ಡಾ.ವಿಷ್ಣುವರ್ಧನ್ ಅವರ 69ನೇ ಜನ್ಮ ದಿನವನ್ನು ಮೈಸೂರಿನಲ್ಲಿ ವಿವಿಧ ಸಂಘಟನೆಗಳು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ತಮ್ಮ ಅಭಿಮಾನಿ ನಾಯಕ ನಟನನ್ನು ಸ್ಮರಿಸಿಕೊಂಡರು. ಕರುಣಾಮಯಿ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮಾವುತರ ಮಕ್ಕಳೊಂದಿಗೆ ವಿಶಿಷ್ಟವಾಗಿ ಆಚರಿಸಿದರು. ಚಿತ್ರನಟಿ ಭಾರತಿ ವಿಷ್ಣುವರ್ಧನ್ ಅವರು ಮಾವುತರ ಮಕ್ಕಳ ನಡುವೆ ಕೇಕ್ ಕತ್ತರಿಸಿ, ಸಿಹಿ ವಿತರಿಸಿದರು. ಅವರಿಗೆ ಪುಸ್ತಕ ಮತ್ತು ಇನ್ನಿತರ ಪರಿಕರಗಳನ್ನು ನೀಡಿದರು.
ಬಳಿಕ ಮಾತನಾಡಿದ ಭಾರತಿ ವಿಷ್ಣುವರ್ಧನ್, ಗಿಡ-ಮರ, ವನ್ಯಪ್ರಾಣಿಗಳೊಂದಿಗೆ ಬದುಕು ನಡೆಸುವ ಕಾಡಿನ ಮಕ್ಕಳು ವಿಶೇಷ ಪ್ರತಿಭೆ ಹೊಂದಿರುತ್ತಾರೆ. ಅವರಿಗೆ ಸೂಕ್ತ ವೃತ್ತಿ ಶಿಕ್ಷಣ ನೀಡಿದರೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವರಿಗೂ ಅವಕಾಶ ದೊರೆತಂತಾಗುತ್ತದೆ ಎಂದರು. ನಟ ವಿಷ್ಣುವರ್ಧನ್ ಅವರಿಗೂ ಕಾಡು, ಪರಿಸರ, ವನ್ಯ ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಗಂಧದ ಗುಡಿ, ನಾಗರಹೊಳೆ, ಜಯಸಿಂಹ ಚಿತ್ರಗಳಲ್ಲಿ ಕಾಡು, ಪರಿಸರ, ವನ್ಯ ಪ್ರಾಣಿ ಪಕ್ಷಗಳ ಸಂರಕ್ಷಣೆಯ ಸಂದೇಶ ಸಾರಿದ್ದರು. ವಿಷ್ಣುವರ್ಧನ್ ಅವರ ಆಶಯದಂತೆ ಕರುಣಾಮಯಿ ಅಭಿಮಾನಿ ಬಳಗ ವಿಷ್ಣು ಹೆಸರಿನಲ್ಲಿ ಫ್ಲೆಕ್ಸ್, ಹೂವಿನ ಹಾರ, ತುರಾಯಿ, ಪಟಾಕಿ ಹೊಡೆದು ದುಂದು ವೆಚ್ಚ ಮತ್ತು ಪರಿಸರ ಹಾಳು ಮಾಡುವ ಬದಲಿಗೆ ಕಾಡಿನ ಮಕ್ಕಳೊಂದಿಗೆ ವಿಶಿಷ್ಟ ರೀತಿಯಲ್ಲಿ ಜನ್ಮ ದಿನವನ್ನು ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಮೂಲತಃ ಮೈಸೂರಿ ನವರೇ ಆಗಿರುವ ವಿಷ್ಣುವರ್ಧನ್‍ರ ಚಿತ್ರಗಳೆಲ್ಲವೂ ಸಾಮಾಜಿಕ ಸಂದೇಶ ಸಾರುವ ಚಿತ್ರಗಳೇ ಆಗಿದ್ದವು. ಕುಟುಂಬದ ಎಲ್ಲರೂ ಒಟ್ಟಿಗೆ ಕುಳಿತು ನೋಡಬಹುದಾದ ಕೌಟುಂ ಬಿಕ ಚಿತ್ರಗಳಾಗಿದ್ದವು. ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಠಿಸಿ ಕಲಾವಿದರಿಗೆ ಮಾದರಿ ಯಾಗಿದ್ದರು. ಕನ್ನಡ ನೆಲ, ಜಲ, ಭಾಷೆಗಳಿಗೆ ಧಕ್ಕೆ ಬಂದಾಗ ಧ್ವನಿ ಎತ್ತಿ ಹೋರಾಟ ಕ್ಕಿಳಿದಿದ್ದರು. ಮೈಸೂರಿನಲ್ಲಿಯೇ ಚಿತ್ರನಗರಿ ಸ್ಥಾಪನೆಯಾಗಬೇಕೆಂಬ ಪರಿಕಲ್ಪನೆ ವಿಷ್ಣು ವರ್ಧನ್ ಅವರದ್ದಾಗಿತ್ತು. ಅವರ ಆಸೆ ಈಡೇರಿದರೆ ಮಾತ್ರ ನಾವು ವಿಷ್ಣುವರ್ಧನ್ ಅವರಿಗೆ ನೀಡುವ ಗೌರವವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಬಳಗದ ಅಧ್ಯಕ್ಷ ಎಂ.ಡಿ. ಪಾರ್ಥಸಾರಥಿ ಮಾತನಾಡಿ, ಅರಮನೆ ಎದುರಿನ ವಿಷ್ಣುವರ್ಧನ್ ಉದ್ಯಾನವನದಲ್ಲಿ ವಿಷ್ಣುವರ್ಧನ್ ಪ್ರತಿಮೆ ಸ್ಥಾಪಿಸಿ, ಉದ್ಯಾನವನವನ್ನು ಅಧಿಕೃತವಾಗಿ ಘೋಷಿಸಿ ಅಭಿವೃದ್ಧಿ ಪಡಿಸಬೇಕು ಎಂದು ಪಾಲಿಕೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಚಿತ್ರನಟ ಅನಿರುದ್ಧ್, ವಿಷ್ಣುವರ್ಧನ್ ಸುಪುತ್ರಿ ಕೀರ್ತಿ ವಿಷ್ಣುವರ್ಧನ್, ಟೆಂಟ್ ಶಾಲೆಯ ನೋಡಲ್ ಅಧಿಕಾರಿ ಕುಸುಮಾ, ಸಿಆರ್‍ಪಿ ವೀಣಾಶ್ರೀ, ಅಭಿಮಾನಿ ಬಳಗದ ವಿಕ್ರಂ ಅಯ್ಯಂಗಾರ್, ಅಜಯ್‍ಶಾಸ್ತ್ರಿ, ಕಡಕೊಳ ಜಗದೀಶ್, ಹರೀಶ್‍ನಾಯ್ಡು, ಚಕ್ರಪಾಣಿ, ಸುಚೀಂದ್ರ, ಬ್ರಹ್ಮಾನಂದ ಇನ್ನಿತರರು ಉಪಸ್ಥಿತರಿದ್ದರು.
ಉದ್ಬೂರು ಬಳಿ ವಿಷ್ಣು ಸ್ಮಾರಕ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್ ಕುಟುಂಬ
ಮೈಸೂರು, ಸೆ,18(ಆರ್‍ಕೆಬಿ)-ಡಾ.ವಿಷ್ಣು ಸ್ಮಾರಕ ಆಗಲೇಬೇಕು. ಆಗುವ ನಂಬಿಕೆ ಇದೆ. ಆದರೆ ಎಲ್ಲದಕ್ಕೂ ಭಗವಂತನ ಇಚ್ಛೆ. ಬಹಳಷ್ಟು ದಿನಗಳಿಂದ ಕಾಯು ತ್ತಿದ್ದೇವೆ. ಸ್ಮಾರಕ ಅಭಿಮಾನಿಗಳಿಗಾಗಿ ಆಗಬೇಕು ಡಾ.ವಿಷ್ಣು ಸ್ಮಾರಕ ಅಭಿಮಾನಿ ಗಳಿಗೆ ನೆಮ್ಮದಿ ನೀಡುವ ತಾಣವಾಗುತ್ತದೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು. ಬುಧವಾರ ನಟ ದಿವಂಗತ ವಿಷ್ಣುವರ್ಧನ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮೈಸೂರಿನ ಉದ್ಬೂರು ಬಳಿಯ ವಿಷ್ಣು ಸ್ಮಾರಕ ನಿಯೋಜಿತ ಸ್ಥಳದಲ್ಲಿ ಸಂಭ್ರಮ ಮನೆ ಮಾಡಿತ್ತು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಮಗಳು ಕೀರ್ತಿ ಸ್ಮಾರಕ ಸ್ಥಳಕ್ಕೆ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿದರು. ಈ ವೇಳೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.
ಡಾ.ವಿಷ್ಣು ವರ್ಧನ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದರು. ಅಲ್ಲದೆ ಡಾ.ವಿಷ್ಣು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ವಿಷ್ಣು ಅವರ ನೆನಪಿನಾರ್ಥ 69 ಗಿಡ ಗಳನ್ನು ನೆಟ್ಟರು. ವಿಷ್ಣು ಸ್ಮಾರಕದ ಪೂರ್ಣ ಸ್ವರೂಪ ಇತಿಹಾಸ ಸೃಷ್ಟಿಸುತ್ತದೆ. ಅಭಿಮಾನಿಗಳಿಗೆ ನೆಮ್ಮದಿ ನೀಡುವ ತಾಣವಾಗುತ್ತದೆ. ಪ್ರತೀ ವರ್ಷ ಇದೇ ಸ್ಥಳದಲ್ಲಿ ಎಲ್ಲರೂ ಸೇರೋಣ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.