ಗೂಡು ಸೇರಿದ ಹಳ್ಳಿ ಹಕ್ಕಿ
ಮೈಸೂರು

ಗೂಡು ಸೇರಿದ ಹಳ್ಳಿ ಹಕ್ಕಿ

December 10, 2019

ಹುಣಸೂರು,ಡಿ.9(ಆರ್‍ಕೆ)-ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ನಾಂದಿ ಹಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ ಅದೇ ಕ್ಷೇತ್ರದಲ್ಲಿ ಕಮಲ ಹಿಡಿದು ಸ್ಪರ್ಧೆಗಿಳಿದಿದ್ದ ಹಳ್ಳಿ ಹಕ್ಕಿ ಹೀನಾಯ ಸೋಲುಂಡು, ಗೂಡು ಸೇರಿದೆ. ಎ.ಹೆಚ್.ವಿಶ್ವನಾಥ್ ಅವರು ಉಪಚುನಾವಣೆಯಲ್ಲಿ ಕಮಲ ಪಕ್ಷದಿಂದ ತೊಡೆತಟ್ಟಿ ಈಗ ಕ್ಷೇತ್ರದ ಮತದಾರರ ಕೆಂಗಣ್ಣಿಗೆ ಗುರಿಯಾದಂತಾ ಗಿದೆ. ಸರ್ಕಾರದ ಬೆಂಬಲ, ಕುರುಬ ಸಮಾಜದ ಸಹಕಾರ, ಘಟಾನುಘಟಿ ನಾಯಕರ ಪ್ರಚಾರದಿಂದ ತಾನು ಉಪ ಚುನಾವಣೆಯಲ್ಲಿ ಜಯಗಳಿಸು ತ್ತೇನೆಂಬ ಅತೀವ ವಿಶ್ವಾಸ ಫಲ ನೀಡಲಿಲ್ಲ. ಮುಖ್ಯಮಂತ್ರಿ ಯಾದಿಯಾಗಿ ಇಡೀ ಸಚಿವ ಸಂಪುಟವೇ ಬಂದು ಪ್ರಚಾರ ಮಾಡಿ ದಾಗ್ಯೂ, ಪ್ರತೀ ಹಳ್ಳಿಯ ಮತದಾರನ ಸೆಳೆಯಲು ಎಲ್ಲಾ ಬಗೆಯ ಕಾರ್ಯತಂತ್ರ ಮಾಡಿ ದರೂ ಫಲ ನೀಡಲಿಲ್ಲ. ಜೆಡಿಎಸ್ ಸಾಂಪ್ರದಾಯಿಕ ಮತಗಳು ಹಾಗೂ ತಮ್ಮ ಸಮುದಾಯದ ಪ್ರಾಧಾನ್ಯವಿದ್ದರೂ, ಆ ಪಕ್ಷದ ಅಭ್ಯರ್ಥಿ ದೇವರಳ್ಳಿ ಸೋಮ ಶೇಖರ್‍ಗೂ ಮಣೆಹಾಕದ ಮತ ದಾರರು, ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್ ಕೈಹಿಡಿದಿದ್ದಾರೆ.

ಜಿಟಿಡಿ ನಡೆ ನನ್ನ ಸೋಲಿಗೆ ಕಾರಣ

ಕೊನೆ ಹಂತದಲ್ಲಿ ಜಿ.ಟಿ. ದೇವೇಗೌಡರ ನಡೆಯಿಂದ ನನಗೆ ಸೋಲುಂಟಾಯಿತು ಎಂದು ಪರಾಜಿತ ಅಭ್ಯರ್ಥಿ ಬಿಜೆಪಿಯ ಅಡಗೂರು ಹೆಚ್. ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿ.ಟಿ.ದೇವೇಗೌಡ ಅವರು ಜೆಡಿಎಸ್‍ನಲ್ಲಿದ್ದುಕೊಂಡೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಿ ಅವರ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ನಾನೂ ಸಹ ಭೇಟಿ ಮಾಡಿ ಬೆಂಬಲ ಕೋರಿದ್ದೆ. ಅವರು ನಮ್ಮನ್ನು ಬೆಂಬಲಿಸಬೇಕಾದ ಅವಶ್ಯಕತೆ ಇರಲಿಲ್ಲ. ಆದರೆ, ಅವರ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸದೇ ಮತಗಳನ್ನು ಕಾಂಗ್ರೆಸ್‍ಗೆ ವರ್ಗಾವಣೆ ಮಾಡಿದರು. ಅದರ ಫಲವೇ ನನ್ನ ಸೋಲು ಎಂದು ನುಡಿದರು.

ಮತ್ತೊಮ್ಮೆ ಮೈತ್ರಿ ಮಾಡಿಕೊಳ್ಳುತ್ತೇವೆಂದು ನಿನ್ನೆ ಮೊನ್ನೆಯವರೆಗೂ ಓಡಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಪಾಪ ಫಲಿತಾಂಶ ನೋಡಿ ಅದೆಷ್ಟು ನೋವಾಗಿದೆಯೋ ಎಂದು ವ್ಯಂಗ್ಯವಾಡಿದ ವಿಶ್ವನಾಥ್, ಮೈತ್ರಿ ಸರ್ಕಾರ ಬೀಳಿಸಬೇಕೆಂಬ ನಮ್ಮ ಉದ್ದೇಶವಂತೂ ಈಡೇರಿದೆ ಎಂದರು.

ಈ ಸೋಲು ನನ್ನ ರಾಜಕೀಯ ಅಂತ್ಯವಲ್ಲ. ನನ್ನ ಕನಸು ಸಾಕಾರ ಗೊಳಿಸಲು ಯಡಿಯೂರಪ್ಪ ನೇತೃತ್ವದ ಸರ್ಕಾರವಿದೆ. ಜನರ ತೀರ್ಮಾ ನವೇ ಅಂತಿಮ. ಅಲ್ಪಾವಧಿಯಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಸೋತಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುತ್ತೇನೆ ಎಂದು ನುಡಿದರು.

Translate »