ಅವಘಡ ಬಳಿಕ ಬಿಕೋ ಎನ್ನುತ್ತಿರುವ  ಒಂಟಿಕೊಪ್ಪಲು ಬಾಲಕಿಯರ ವಿದ್ಯಾರ್ಥಿನಿಲಯ
ಮೈಸೂರು

ಅವಘಡ ಬಳಿಕ ಬಿಕೋ ಎನ್ನುತ್ತಿರುವ ಒಂಟಿಕೊಪ್ಪಲು ಬಾಲಕಿಯರ ವಿದ್ಯಾರ್ಥಿನಿಲಯ

December 19, 2018

ಮೈಸೂರು: ಸದಾ ವಿದ್ಯಾರ್ಥಿನಿಯರಿಂದ ಕಿಕ್ಕಿರಿದಿರುತ್ತಿದ್ದ ಮೈಸೂರಿನ ಒಂಟಿಕೊಪ್ಪಲಿನ ಮೆಟ್ರಿಕ್ ನಂತರದ ಬಾಲಕಿಯರ ಸಾರ್ವಜನಿಕ ವಿದ್ಯಾರ್ಥಿನಿಲಯ ಇದೀಗ ವಿದ್ಯಾರ್ಥಿ ಗಳಿಲ್ಲದೆ ಭಣಗುಡುವಂತಾಗಿದೆ.

ಹಾಸ್ಟೆಲ್‍ನ ಮೆಟ್ಟಿಲು ಕೆಳಗಿದ್ದ ಯುಪಿ ಎಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಾಬರಿ ಗೊಂಡ ವಿದ್ಯಾರ್ಥಿನಿಯರು ಹೊರಬರುವ ವೇಳೆ ಉಂಟಾದ ನೂಕು ನುಗ್ಗಲಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಶನಿ ವಾರ ರಾತ್ರಿಯ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದವರು ಹಾಗೂ ಗಾಯಗೊಂ ಡಿದ್ದ ವಿದ್ಯಾರ್ಥಿನಿಯರು ಭಾನುವಾರ ಮಧ್ಯಾಹ್ನದ ವೇಳೆಗೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಒಟ್ಟು 372 ವಿದ್ಯಾರ್ಥಿನಿಯರು ಈ ಹಾಸ್ಟೆಲ್‍ನಲ್ಲಿ ಪ್ರವೇಶಾತಿ ಪಡೆದಿದ್ದು, ಶನಿ ವಾರ ಅವಘಡ ಸಂಭವಿಸುವ ವೇಳೆ 270ಕ್ಕೂ ವಿದ್ಯಾರ್ಥಿನಿಯರು ಇದ್ದರು. ಈ ಪೈಕಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅವ ರಲ್ಲಿ ಬಹುತೇಕ ಮಂದಿ ಆಸ್ಪತ್ರೆಯಿಂದ ನೇರ ವಾಗಿ ತಮ್ಮ ಮನೆಗಳಿಗೆ ತೆರಳಿದ್ದು, ಉಳಿದ ವಿದ್ಯಾರ್ಥಿಗಳೂ ತಮ್ಮ ಮನೆಗಳತ್ತ ಮುಖ ಮಾಡಿದ್ದರೆ, ಕೆಲವರು ಮೈಸೂರಿನ ವಿವಿಧ ಪ್ರದೇಶದಲ್ಲಿರುವ ತಮ್ಮ ಸಂಬಂಧಿಕರ ಮನೆ ಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಅನೇಕರಿಗೆ ಸಮೀಪದ ಇನ್ನಿತರ ಹಾಸ್ಟೆಲ್‍ಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ.

ಹೀಗಾಗಿ ನಿತ್ಯ ವಿದ್ಯಾರ್ಥಿನಿಯರಿಂದ ತುಂಬಿರುತ್ತಿದ್ದ ಹಾಸ್ಟೆಲ್ ಸೋಮವಾರ ಸಿಬ್ಬಂದಿ ವರ್ಗದ ನಾಲ್ಕೈದು ಮಂದಿ ಬಿಟ್ಟರೆ ಯಾರೂ ಇಲ್ಲದೇ ಭಣಗುಡುತ್ತಿತ್ತು. ಹಾಸ್ಟೆಲ್‍ನ ಎಲ್ಲಾ ಕೊಠಡಿಗಳಿಗೂ ಬೀಗ ಜಡಿದಿರುವುದು ಗೋಚರಿಸಿತು. ಆಘಾತ ಕ್ಕೊಳಗಾಗಿರುವ ವಿದ್ಯಾರ್ಥಿನಿಯರನ್ನು ಪೋಷಕರು ಬಂದು ಕರೆದುಕೊಂಡು ಹೋಗಿದ್ದರೆ, ಉಳಿದ ವಿದ್ಯಾರ್ಥಿನಿಯರು ತಾವಾಗಿಯೇ ಮನೆ ಸೇರಿಕೊಂಡಿದ್ದಾರೆ.

ಜಂಟಿ ನಿರ್ದೇಶಕರ ಭೇಟಿ: ಹಾಸ್ಟೆಲ್‍ಗೆ ಇಂದು ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಬಿಂದ್ಯಾ, ಹಾಸ್ಟೆಲ್‍ನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿ ದರು. ಇದೇ ವೇಳೆ ಪತ್ರಿಕೆಯೊಂದಿಗೆ ಮಾತ ನಾಡಿದ ಅವರು, ಶಾರ್ಟ್ ಸಕ್ರ್ಯೂಟ್‍ನಿಂದ ಹಾನಿಗೊಂಡಿದ್ದ ಯುಪಿಎಸ್ ದುರಸ್ತಿ ಗೊಳಿಸಲಾಗಿದೆ. ವಿದ್ಯಾರ್ಥಿನಿಯರು ಆಘಾ ತಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್‍ಗೆ ಕೂಡಲೇ ಬರಬೇಕೆಂದು ಒತ್ತಾಯ ಮಾಡುವುದಿಲ್ಲ. ಒಂದೆರಡು ದಿನ ಅವರು ವಿಶ್ರಾಂತಿ ಪಡೆಯುವ ಅಗತ್ಯವಿದೆ. ಯಾವುದೇ ವಿದ್ಯಾರ್ಥಿನಿಗೂ ಗಂಭೀರ ಸಮಸ್ಯೆ ಆಗಿಲ್ಲ ಎಂದು ತಿಳಿಸಿದರು.

ಸಮೀಪದ ಹಾಸ್ಟೆಲ್‍ನಲ್ಲಿ ವಾಸ್ತವ್ಯ: ಅವ ಘಡದ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿ ನಿಯರಿಗೆ ತಾತ್ಕಾಲಿಕವಾಗಿ ಸಮೀಪದ ಇನ್ನಿ ತರ ಹಾಸ್ಟೆಲ್‍ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡ ಲಾಗಿದೆ. ಇದೇ ವಾತಾವರಣದಲ್ಲಿದ್ದರೆ ಘಟನೆಯ ಬಗ್ಗೆ ನೆನೆದು ಆತಂಕಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮಾಜಿ ಮೇಯರ್ ಭೇಟಿ: ಮಾಜಿ ಮೇಯರ್ ಪುರುಷೋತ್ತಮ್ ಇಂದು ಹಾಸ್ಟೆಲ್‍ಗೆ ಭೇಟಿ ನೀಡಿ ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿ ವರ್ಗದಿಂದ ಮಾಹಿತಿ ಪಡೆದರು. ಇದೇ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಬಗ್ಗೆ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಿ ಮೂಲ ಭೂತ ಸೌಲಭ್ಯ ಕಲ್ಪಿಸಿಕೊಡಬೇಕು. ವರ್ಷ ದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿ ದ್ದರೆ, ಅದನ್ನು ಸರ್ಕಾರದ ಗಮನಕ್ಕೆ ತಂದು ಹಾಸ್ಟೆಲ್‍ಗಳ ಸಂಖ್ಯೆ ಹೆಚ್ಚಿಸುವ ಸಂಬಂಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಇಚ್ಛಾಸಕ್ತಿ ಪ್ರದರ್ಶಿಸಬೇಕು. ಅವಘಡ ನಡೆದಿರುವುದು ಹೆಣ್ಣು ಮಕ್ಕಳು ಇರುವ ಹಾಸ್ಟೆಲ್‍ನಲ್ಲಿ. ಹೀಗಾಗಿ ಹೆಚ್ಚು ಜಾಗ್ರತೆ ವಹಿಸಬೇಕು. ಮುಂದೆ ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚ ರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದಸಂಸ ಮುಖಂಡ ಕುಲ ಕರ್ಣಿ, ಮೈಸೂರು ತಾಲೂಕು ಎಸ್‍ಸಿ-ಎಸ್‍ಟಿ ಹಿತರಕ್ಷಣಾ ಸಮಿತಿ ಸದಸ್ಯ ಧನಗಳ್ಳಿ ಸ್ವಾಮಿ, ಹಾಸ್ಟೆಲ್ ವಾರ್ಡನ್ ಕಾಮಾಕ್ಷಮ್ಮ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ಮೈಸೂರು: ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮ ಹಾಗೂ ಅನಾಹುತಕ್ಕೆ ಆಸ್ಪದ ಆಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಶೀಘ್ರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ಇಲಾಖೆ ಜಂಟಿ ನಿರ್ದೇಶಕಿ ಬಿಂದ್ಯಾ ತಿಳಿಸಿದರು.

ಒಂಟಿಕೊಪ್ಪಲಿನ ಹಾಸ್ಟೆಲ್‍ಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈಗಾಗಲೇ ವಸತಿ ಶಾಲೆಗಳಿಗೆ ಹೊಸದಾಗಿ ನೇಮಕಗೊಂಡ ಅಡುಗೆಯವರು ಹಾಗೂ ಇತರೆ ಸಿಬ್ಬಂದಿಗೆ ಅವಘಡ ಎದುರಿಸುವ ಬಗ್ಗೆ ಹಾಗೂ ಪ್ರಥಮ ಚಿಕಿತ್ಸೆ ಕೈಗೊಳ್ಳುವ ಬಗ್ಗೆ ತರಬೇತಿ ನೀಡಲಾಗಿದೆ. ಅದೇ ಮಾದರಿಯಲ್ಲಿ ಇಲಾಖೆಯ ಹಾಸ್ಟೆಲ್‍ಗಳ ಅಡುಗೆ ಸಿಬ್ಬಂದಿಗೆ 15 ದಿನಗಳ ಒಳಗೆ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು. ಕಚೇರಿ ಕೆಲಸದ ಹಿನ್ನೆಲೆಯಲ್ಲಿ ವಾರ್ಡನ್‍ಗಳು ಸದಾ ಹಾಸ್ಟೆಲ್‍ಗಳಲ್ಲೇ ಇರಲು ಸಾಧ್ಯವಿಲ್ಲ. ಆದರೆ ಅಡುಗೆ ಸಿಬ್ಬಂದಿ ಹೆಚ್ಚು ಸಮಯ ಇರುತ್ತಾರೆ. ಹೀಗಾಗಿ ಇವರನ್ನು ಕೇಂದ್ರೀಕರಿಸಿ ಸುರಕ್ಷತಾ ಕ್ರಮಗಳು ಹಾಗೂ ಅನಾಹುತದ ವೇಳೆಯಲ್ಲಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.

Translate »