ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಅವರ ನಡುವಿನ ವಾಕ್ಸ ಮರ ಮುಂದುವರೆದಿದ್ದು, ಇದನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
ವಿಶ್ವನಾಥ್ ಪದೇ ಪದೆ ತಮ್ಮ ವಿರುದ್ಧ ಹರಿಹಾಯು ತ್ತಿರುವುದಕ್ಕೆ ಕೆಂಡಾಮಂಡಲವಾಗಿರುವ ಸಿದ್ದರಾಮಯ್ಯ, ಕಿಡಿಗೇಡಿತನದ ಹೇಳಿಕೆಗಳಿಗೆ ಉತ್ತರ ನೀಡಲು ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ. ಟೀಕೆಗಳಿಗೆ ಟ್ವೀಟ್ ಮೂಲಕ ಉತ್ತರಿಸಿ ರುವ ಸಿದ್ದರಾಮಯ್ಯ, ‘ಅವರ ಬೇಜವಾಬ್ದಾರಿ ಹೇಳಿಕೆಗಳಿಗೆ ಸದ್ಯಕ್ಕೆ ನನ್ನಿಂದ ಉತ್ತರ ನೀಡಲು ಸಾಧ್ಯವಿಲ್ಲ. ಅವರಿಗೆ ದೇವರು ಒಳ್ಳೆ ಬುದ್ಧಿ ನೀಡಲಿ, ನಾನು ಸಮನ್ವಯ ಸಮಿತಿ ಸಭೆಯಲ್ಲೇ ಚರ್ಚೆ ಮಾಡುತ್ತೇನೆ’ ಎಂದಿದ್ದಾರೆ. ಒಂದರ ಹಿಂದೆ ಒಂದು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷರು ಹೊಟ್ಟೆಕಿಚ್ಚಿನ ಮಾತುಗಳನ್ನು ಆಡುತ್ತಿ ದ್ದಾರೆ. ‘ಮೊದಲು ಜಿ.ಟಿ. ದೇವೇಗೌಡ, ಇದೀಗ ವಿಶ್ವನಾಥ್ ….. ಮುಂದೆ ಯಾರೋ ಗೊತ್ತಿಲ್ಲ’ ಎನ್ನುವ ಮೂಲಕ ಈ ಹೇಳಿಕೆಗಳ ಹಿಂದೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇ ಗೌಡ ಮತ್ತು ಕುಮಾರಸ್ವಾಮಿ ಇರಬಹುದೆಂಬ ಸಂಶಯ ವ್ಯಕ್ತಪಡಿಸಿದಂತಿದೆ. ವಿಶ್ವನಾಥ್ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಯನ್ನು ಇಂದೂ ಮುಂದುವರೆಸಿರುವ ವಿಶ್ವನಾಥ್, ಈ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗಲೂ, ಅವರ ಚಮಚಾ ಬೆಂಬಲಿಗರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಹೇಳಿಕೆ ನೀಡಿ ಮುಜುಗರವುಂಟು ಮಾಡಿದ್ದರು ಎಂದು ವಿಶ್ವನಾಥ್ ಇಂದಿಲ್ಲಿ ಮತ್ತೆ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚಮಚಾಗಳು ಈಗಲೂ ಅದನ್ನೇ ಮಾಡುತ್ತಿದ್ದಾರೆ, ಇದರಿಂದ ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವ ಜೊತೆಗೆ ಕುಮಾರಸ್ವಾಮಿ ಅವರ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಹುದ್ದೆ ಬಗ್ಗೆ ಅನವಶ್ಯಕವಾಗಿ ಚರ್ಚೆ ಬೇಡ ಎಂಬುದು ತಮ್ಮ ಅನಿಸಿಕೆ. ಹೀಗೆ ಚರ್ಚೆ ಮಾಡುವ ಮೂಲಕ ಮೈತ್ರಿ ಧರ್ಮಕ್ಕೆ ಏಕೆ ಅಡ್ಡಿ ಪಡಿಸಬೇಕು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗ್ತಾರೆ ಎನ್ನುವ ಮೂಲಕ ಅವರ ಬೆಂಬಲಿಗರು ಚಮಚಾಗಿರಿ ಮಾಡುತ್ತಿದ್ದಾರೆ.ಇವರನ್ನು ಚಮಚಾಗಳು ಅನ್ನದೇ ಇನ್ನೇನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಪದೇ ಪದೆ ಹೇಳಿಕೆ ನೀಡುತ್ತಿರುವ ಚಮಚಾಗಿರಿಗೆ ಇತಿಶ್ರೀ ಹಾಡಬೇಕು.
ಈ ಎಲ್ಲ ಬೆಳವಣಿಗೆಗಳ ಕುರಿತು ಚರ್ಚಿಸಲು ತುರ್ತು ಸಮನ್ವಯ ಸಮಿತಿ ಸಭೆ ಕರೆಯಬೇಕು ಎಂದು ಆಗ್ರಹಿಸಿದ ಅವರು, ಸಭೆಗೆ ತಮ್ಮನ್ನೂ ಕರೆಯುವಂತೆ ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷರು ಹಾಗೂ ಜೆಡಿಎಸ್ ಅಧ್ಯಕ್ಷರು ಸಮನ್ವಯ ಸಮಿತಿಯಲ್ಲಿದ್ದರೆ ಅದು ಪರಿಪೂರ್ಣ, ಇಲ್ಲದಿದ್ದರೆ ಪರಿಪೂರ್ಣವಲ್ಲ ಎಂದ ಅವರು, ಸಮನ್ವಯ ಸಮಿತಿಗೆ ನಮ್ಮನ್ನು ಕರೆಯಲಿ. ಆಗ ಅಲ್ಲೇ ಉತ್ತರಿಸುವೆ ಎಂದಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ಗೆ ಕರೆದುಕೊಂಡು ಬಂದಿದ್ದು ಯಾರು ಎಂಬುದು ಇಡೀ ದೇಶಕ್ಕೆ ಗೊತ್ತು, ಅವರ ಬಗ್ಗೆ ನಮಗೆ ಹೊಟ್ಟೆ ಕಿಚ್ಚು ಇದ್ದಿದ್ದರೆ, ಅಪ್ಪಿತಪ್ಪಿಯೂ ಕಾಂಗ್ರೆಸ್‍ಗೆ ಕರೆದು ಕೊಂಡು ಬರುತ್ತಿರಲಿಲ್ಲ. ಸರ್ಕಾರದಲ್ಲಿ ಕಾಂಗ್ರೆಸ್‍ನವರಿಗೆ ತಾರತಮ್ಯವಾಗಿದೆಯಂತೆ ಎಂದು ವ್ಯಂಗ್ಯವಾಡಿದ ಅವರು, ಶೇಕಡಾ 70ರಷ್ಟು ನಿಗಮ-ಮಂಡಳಿಗಳಲ್ಲಿ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್ಸಿಗರು, ಅಷ್ಟು ಪರ್ಸೆಂಟ್ ಅಧಿಕಾರ ಕಾಂಗ್ರೆಸ್ ಎಂಜಾಯ್ ಮಾಡುತ್ತಿದೆ, ಜೆಡಿಎಸ್ ಕೇವಲ ಶೇಕಡಾ 30ರಷ್ಟು ಅಧಿಕಾರ ಪಡೆದಿದೆ.
ಹೀಗೆ ಎಲ್ಲ ಅಧಿಕಾರ ನೀವೇ ಇಟ್ಟುಕೊಂಡು ಮೇಲೆ ನಮಗೆ ನೋವಾಗಿದೆ ಎಂದು ಏಕೆ ಹೇಳುತ್ತೀರಿ ಸಿದ್ಧರಾಮಯ್ಯ ಎಂದು ಪ್ರಶ್ನಿಸಿದ ಅವರು, ಎಲ್ಲವನ್ನೂ ಸಹಿಸಿಕೊಂಡು ಮೈತ್ರಿ ಧರ್ಮ ಪಾಲಿಸಿಕೊಂಡು ಬಂದಿದ್ದೇವೆ, ಇದು ಕಾಂಗ್ರೆಸ್ ವರಿಷ್ಠರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಇದು ವಿಶ್ವನಾಥ್ ಹೇಳಿಕೆಯಲ್ಲ, ತಾವು ಹೇಳಬೇಕಾದ್ದನ್ನು ಕುಮಾರಸ್ವಾಮಿ ಅವರ ಮೂಲಕ ಹೇಳಿಸಿದ್ದಾರೆ ಎಂದಿದ್ದಾರೆ. ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ನಂತರ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗಲಿದೆ ಎಂಬುದರ ಸೂಚನೆ ಇದು. ತಾಕತ್ ಇದ್ರೆ ಜೆಡಿಎಸ್ ಹಾಗೂ ಕಾಂಗ್ರೆಸ್ ತಮ್ಮ ಶಾಸಕರನ್ನು ಒಗ್ಗೂಡಿಸಿ ಇಟ್ಟುಕೊಳ್ಳಲಿ, ಅವರು ಕಚ್ಚಾಡಿಕೊಂಡು ಸರ್ಕಾರ ಬಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಬಗ್ಗೆ ನನಗೆ ಗೌರವವಿದೆ
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ. ಅವರ ಮೇಲೆ ನನಗೆ ಗೌರವವಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಇಂದಿಲ್ಲಿ ತಿಳಿಸಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಟ್ವೀಟ್ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅದನ್ನು ನೋಡಿಯೂ ಇಲ್ಲ ಎಂದು ಹೇಳಿದರು.
ಮೈತ್ರಿ ಧರ್ಮದಿಂದ ನನ್ನ ಬಾಯಿ ಕಟ್ಟಿ ಹಾಕಿದ್ದಾರೆ. ಹಾಗಾಗಿ ನನ್ನ ಟಾರ್ಗೆಟ್ ಮಾಡಿ ಮೊದಲು ಜಿ.ಟಿ.ದೇವೇಗೌಡರು ಮಾತನಾಡಿದರು. ಈಗ ವಿಶ್ವನಾಥ್ ಮಾತ ನಾಡಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದ ರಾಮಯ್ಯ ಏಕೆ ನನ್ನ ಹೆಸರು ಹೇಳಿದ್ದಾರೋ ಗೊತ್ತಿಲ್ಲ. ನಾನು ಅವರು ಜೊತೆಯಲ್ಲಿದ್ದಾಗ, ಅವರು ಬೇರೆ ಪಕ್ಷಕ್ಕೆ ಹೋದಾಗ, ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿರೋಧ ಪಕ್ಷದಲ್ಲಿ ಶಾಸಕನಾಗಿದ್ದಾಗ ಎಲ್ಲಿಯೂ ನಾನು ಅವರ ವಿರುದ್ಧ ಮಾತನಾಡಿಲ್ಲ. ಅವರ ಮೇಲೆ ನನಗೆ ಅಪಾರ ಗೌರವವಿದೆ ಎಂದು ತಿಳಿಸಿದರು.
ವಿಶ್ವನಾಥ್ ಹೇಳಿಕೆ ಗಂಭೀರವಾಗಿ ಪರಿಗಣಿಸಬಾರದು: ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಮಾತನಾಡಬೇಕು. ಸಿದ್ದರಾಮಯ್ಯ ಅವರೇ ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದಿದ್ದಾರೆ. ಅವರೇ ಹಾಗೆಂದ ಮೇಲೆ ನಾವು ಬೇರೆ ಮಾತು ಆಡಬಾರದು. ವಿಶ್ವನಾಥ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು.
ಮೇ 23ರ ಫಲಿತಾಂಶಕ್ಕೂ ರಾಜ್ಯ ಸರ್ಕಾರಕ್ಕೂ ಏನು ಸಂಬಂಧ?: ಮೇ 23ರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಮೈತ್ರಿ ಸರ್ಕಾರ ಇರಲ್ಲ ಎಂಬ ಬಿಜೆಪಿ ನಾಯಕರ ಮಾತಿಗೆ ತಿರುಗೇಟು ಕೊಟ್ಟ ಅವರು, ಫಲಿತಾಂಶ ಬರುವುದು ಕೇಂದ್ರದಲ್ಲಿ ಯಾವ ಸರ್ಕಾರ ರಚನೆಯಾಗಬೇಕು ಎಂದು. ಆ ಫಲಿತಾಂಶಕ್ಕೂ ರಾಜ್ಯ ಸರ್ಕಾರಕ್ಕೂ ಏನು ಸಂಬಂಧ? ರಾಜ್ಯ ಸರ್ಕಾರ ಹೇಗೆ ಪತನವಾಗುತ್ತದೆ ಎಂದು ಪ್ರಶ್ನಸಿದರು.
ಚಲುವರಾಯಸ್ವಾಮಿಗೆ ತಿರುಗೇಟು: ಮೈಸೂರಿನಲ್ಲಿ ಜಿ.ಟಿ.ದೇವೇಗೌಡರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂಬ ಕಾಂಗ್ರೆಸ್ ಶಾಸಕ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಜಿಟಿಡಿ, ಆ ಮಾತಿನ ಅರ್ಥ ಏನು? ಎಂದು ಅವರನ್ನೇ ಕೇಳಬೇಕು. ನಾನು ಎಲ್ಲವ್ನನೂ ಮರೆತು ಸಿದ್ರಾಮಯ್ಯ ಜೊತೆ ಪ್ರಚಾರ ಮಾಡಿದ್ದೇನೆ. ಮೈತ್ರಿ ಧರ್ಮವನ್ನು ಪಾಲಿಸಿದ್ದೇನೆ. ಆದರೆ ಮಂಡ್ಯದಲ್ಲಿ ಅವರು ಪಾಲಿಸಿಲ್ಲ ಎಂದು ಅವರೇ ನೇರವಾಗಿ ಒಪ್ಪಿಕೊಂಡಿದ್ದಾರೆ. ಜಿಟಿಡಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಚಲುವರಾಯಸ್ವಾಮಿ ಅವರನ್ನೇ ಕೇಳಿ ಎಂದರು.
ನೀರಿಲ್ಲ.. ಮೇವಿಲ್ಲ ಎಂಬ ವಿಚಾರ ಕೇಳಲಿ: ಕುಮಾರಸ್ವಾಮಿ ಅವರು ದೇವಸ್ಥಾನಕ್ಕೆ ಹೊಗುವುದೆಲ್ಲ ಟೀಕೆ ಟಿಪ್ಪಣಿಯೇ? ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಲ್ಲರೂ ದೇವಸ್ಥಾನಕ್ಕೆ ಹೋಗಿದ್ದಾರೆ. ಮನಸ್ಸಿಗೆ ಬಂದಾಗ ದೇವಾಲಯಕ್ಕೆ ಹೋಗುತ್ತಾರೆ. ಅದನ್ನು ಟೀಕೆ ಟಿಪ್ಪಣಿ ಮಾಡುವುದು ಸರಿಯಲ್ಲ. ನೀರಿಲ್ಲ, ಮೇವಿಲ್ಲ ಎಂಬ ವಿಚಾರವನ್ನು ಕೇಳುವುದು ನಿಮ್ಮ ಕೆಲಸ. ಜನಪ್ರತಿನಿಧಿಗಳು ಪ್ರತಿ ಪಕ್ಷದ ನಾಯಕರು ಈ ಬಗ್ಗೆ ನೋಡಿಕೊಂಡು ಮಾತನಾಡಬೇಕು ಎಂದು ಅವರು ತಮ್ಮ ನಾಯಕರ ಸಮರ್ಥಿಸಿಕೊಂಡರು.