ಎಲ್ಲೆ ಮೀರಿತೋ ನಾಯಕರ ಮಾತು…!?
ಮೈಸೂರು

ಎಲ್ಲೆ ಮೀರಿತೋ ನಾಯಕರ ಮಾತು…!?

April 4, 2019

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆ ಎಂಬುದು ಜನತೆಯ ಪಾಲಿಗೆ ಒಂದು ಉತ್ಸವ. ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ಸದಾವಕಾಶ. ಹಾಗೆಯೇ, ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ತಮ್ಮ ಧ್ಯೇಯೋ ದ್ದೇಶ, ಸಾಧನೆಯನ್ನು ಸಾದರಪಡಿಸಿ ಜನಾಭಿಪ್ರಾಯ ಸಂಗ್ರಹಿಸುವ ಸಂದರ್ಭವೂ ಹೌದು.

ಇಂತಹ ಪವಿತ್ರ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ನಡೆದುಕೊಳ್ಳುವ ರೀತಿ, ಬಳಸುವ ಭಾಷೆ ಮತ್ತು ತೋರಿಸುವ ಆಸೆ ಆಮಿಷಗಳು ಸಾರ್ವಜನಿಕ ರಲ್ಲಿ ಹೇಸಿಗೆ ಉಂಟು ಮಾಡುತ್ತಿವೆ. ಅದರಲ್ಲೂ ನಾಗರಿಕತೆಯ ಎಲ್ಲೆ ಮೀರಿದ ಮಾತುಗಳಿಂದಾಗಿ ಸಾಮಾಜಿಕ ಸಾಮರಸ್ಯ ಹದ ಗೆಡುವುದರೊಂದಿಗೆ ಜನರ ಭಾವನೆಗಳಿಗೂ ಭಾರೀ ಧಕ್ಕೆಯ ನ್ನುಂಟು ಮಾಡುತ್ತಿವೆ. ಇಂಥ ಬೆಳವಣಿಗೆಗಳು ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಪ್ರಸಕ್ತ ಲೋಕಸಭಾ ಚುನಾವಣೆ ಯಲ್ಲಿ ರಾಜ್ಯಾದ್ಯಂತ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರ ನಡೆ ಹಾಗೂ ಭಾಷಾ ಪ್ರಯೋಗ ಸಾಕಷ್ಟು ವಿವಾದಗಳಿಗೆ ನಾಂದಿಯಾಡುತ್ತಿದೆ. ಇದನ್ನು ಅವರು, ವಾಕ್ ಸ್ವಾತಂತ್ರ್ಯವೆಂದು ಸಮರ್ಥಿಸಿಕೊಂಡರೂ ಸಾರ್ವತ್ರಿಕವಾಗಿ ಅವೆಲ್ಲವೂ ಆಕ್ಷೇಪಾರ್ಹ ಮಾತುಗಳೇ ಆಗಿವೆ. ಕೆಲವು ನಾಯಕರ ಆಕ್ಷೇಪಾರ್ಹ ಮಾತುಗಳಿಗೆ ಕೆಲವೊಂದು ಕಡೆ ಪ್ರಕರಣಗಳು ದಾಖಲಾದರೆ, ಮತ್ತೆ ಕೆಲವು ಕಡೆ ಅವುಗಳಿಗಿಂತ ಕೀಳು ಮಟ್ಟದ ಭಾಷೆಯ ಪ್ರತಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಚುನಾವಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಮಂಡ್ಯದ ಮದ್ದೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇ ಗೌಡ, ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿರುವ ಸುಮಲತಾ ಅಂಬರೀಶ್ ಅವರು `ಮಂಡ್ಯ ಗೌಡ್ತಿ ಅಲ್ಲ. ಅವರು ಆಂಧ್ರದವರು’ ಎಂದು ಹೇಳಿಕೆ ನೀಡುವ ಮೂಲಕ ಪುಳ್ಳೆಗೆ ಬೆಂಕಿ ಹಚ್ಚಿದರು. ಈ ಹೇಳಿಕೆ ಹಿಂದೆಯೇ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ `ಸುಮಲತಾ ಅವರು ತಮ್ಮ ಮನೆಗೆ ಬಂದವರಲ್ಲಿ ಯಾರನ್ನಾದರೂ ಮಾತನಾಡಿಸಿದ್ದಾರೆಯೇ? ಯಾರಿಗೆ ಕುಡಿಯಲು ಒಂದು ಲೋಟ ನೀರು ಕೊಟ್ಟಿದ್ದಾರೆ’?

ಎಂದು ಪ್ರಶ್ನಿಸುತ್ತಾ ಶ್ರೀಕಂಠೇಗೌಡ ಹೊತ್ತಿಸಿದ ಬೆಂಕಿಗೆ ಸ್ವಲ್ಪ ತುಪ್ಪ ಸುರಿದರು. ಇದಾದ ಕೆಲವೇ ದಿನಗಳಲ್ಲಿ ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, `ಗಂಡ ಸತ್ತು ತಿಂಗಳಾಗಿಲ್ಲ. ಈಯಮ್ಮ ರಾಜಕೀಯಕ್ಕೆ ಬರಬೇಕಾಗಿತ್ತಾ?’ ಎಂಬ ಹೇಳಿಕೆ ನೀಡುವ ಮೂಲಕ ಅದಾಗಲೇ ಉರಿಯುತ್ತಿದ್ದ ಬೆಂಕಿ ಜ್ವಾಲೆ ವ್ಯಾಪಿಸಲು ಕಾರಣರಾದರು. ಈ ಬಗ್ಗೆ ಪ್ರಶ್ನಿಸಿದವರಿಗೆ, `ನಾನು ಹೇಳಿದ್ದೆ ಸರಿ. ಅದರಲ್ಲೇನು ತಪ್ಪು. ಕ್ಷಮೆ ಕೇಳುವ ಅಗತ್ಯ ಇಲ್ಲ’ ಎಂದು ರೇವಣ್ಣ ರೇಗಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಕೆ.ಆರ್. ಪೇಟೆಯಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ, ಸುಮಲತಾ ಅವರ ಮುಖದಲ್ಲಿ `ದುಃಖದ ಛಾಯೆ ಇಲ್ಲ. ಅವರದು ಬರೀ ನಟನೆ’ ಎಂದು ಹೇಳುವ ಮೂಲಕ ಟೀಕಾಕಾರರಿಗೆ ಭಾರೀ ಆಹಾರವಾದರು.

ಈಗ ಹಾಲಿ ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ನಾಗಮಂಗಲ ತಾಲೂಕಿನ ಗ್ರಾಮವೊಂದರಲ್ಲಿ ಮಂಗಳವಾರ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, `ಸುಮಲತಾ ಒಕ್ಕಲಿಗರಲ್ಲ, ನಾಯ್ಡು. ದರ್ಶನ್ ನಾಯ್ಡು, ರಾಕ್‍ಲೈನ್ ನಾಯ್ಡು. ಇವರೆಲ್ಲಾ ಮಂಡ್ಯದಲ್ಲಿ ಬಂದು ರಾಜಕೀಯ ಮಾಡುವುದಾದರೆ ಮಂಡ್ಯದ ಗೌಡರ ಕಥೆ ಏನು’ ಎಂದು ಪ್ರಶ್ನಿಸುವ ಮೂಲಕ ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ. `20 ವರ್ಷ ಕಾಲ ಅಂಬರೀಶ್‍ಗಾಗಿ ದುಡಿದೆ’ ಎಂದು ಹೇಳಿ ಅಂಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇದಕ್ಕೆ ಸ್ವತಃ ಸುಮಲತಾ ಜನರ ತೀರ್ಮಾನಕ್ಕೆ ಈ ವಿಚಾರವನ್ನು ಬಿಟ್ಟಿದ್ದು, ದರ್ಶನ್ ಮಾತ್ರ, `ಹೌದು ನಾನು ನಾಯ್ಡು. ಕಲಾವಿದರಿಗೆ ಜಾತಿ ಇಲ್ಲ. ನಾನೊಬ್ಬ ಕಾಡು ಮನುಷ್ಯ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅಂಬರೀಶ್ ಬದುಕಿರುವವರೆಗೆ ಯಾರೊಬ್ಬರೂ ಸುಮಲತಾ ಜಾತಿಯ ವಿಚಾರದಲ್ಲಿ ಸೊಲ್ಲೆತ್ತಲಿಲ್ಲ. ಆ ವಿಚಾರ ಯಾರಿಗೂ ಗೊತ್ತೇ ಇರಲಿಲ್ಲ. ಆದರೆ, ಚುನಾವಣಾ ಲಾಭಕ್ಕಾಗಿ ಈಗ ಜಾತಿಯನ್ನು ಎಳೆದು ತರುತ್ತಿರುವುದು ಬುದ್ಧಿಜೀವಿಗಳಲ್ಲಿ ಮಾತ್ರವಲ್ಲ, ಜನಸಾಮಾನ್ಯರಲ್ಲೂ ಜನನಾಯಕರ ಬಗ್ಗೆ ಹೇಸಿಗೆ ಹುಟ್ಟಿಸಿದೆ. ರಾಜಕೀಯ ಲಾಭಕ್ಕಾಗಿ ಏನೆಲ್ಲಾ ತಂತ್ರ, ಕುತಂತ್ರಗಳನ್ನು ಹೆಣೆಯಲಾಗುತ್ತದೆ. ಯಾವೆಲ್ಲಾ ಕೀಳು ಭಾಷೆ ಬಳಸಲಾಗುತ್ತದೆ ಎಂಬ ಆಕ್ರೋಶ ವ್ಯಕ್ತವಾಗುತ್ತದೆ.

ಬೇರೆಡೆ ಏನೂ ಕಮ್ಮಿ ಇಲ್ಲ : ಮಂಡ್ಯ ಮಾತ್ರವಲ್ಲ, ರಾಜ್ಯದ ಬೇರೆ ಬೇರೆ ಕಡೆ ವಿವಿಧ ಪಕ್ಷದ ನಾಯಕರು ಮತ ಪ್ರಚಾರದ ವೇಳೆ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡುತ್ತಿರುವುದು ಪ್ರತಿನಿತ್ಯ ಸಾಗಿದೆ. ತುಮಕೂರಿನಲ್ಲಿ ಮಾಜಿ ಶಾಸಕ ಸುರೇಶ್‍ಗೌಡ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಅವರ ಕುಟುಂಬದವರು ಪ್ರಚಾರಕ್ಕೆ ಬಂದಾಗ ದೊಣ್ಣೆ ತಗೊಂಡು ಬಾರಿಸಿ ಎಂದು ಹೇಳಿ; ಜೆಡಿಎಸ್ ನಾಯಕರ ಕೆಂಗಣ್ಣಿಗೆ ಸುರೇಶ್‍ಗೌಡ ಗುರಿಯಾಗಿದ್ದಾರೆ. ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಸಹ ತುಮಕೂರಿಗೆ ಮಾಜಿ ಪ್ರಧಾನಿ ದೇವೇಗೌಡರು ಸ್ಥಳಾಂತರಗೊಳ್ಳುವುದನ್ನು ವಿರೋಧಿಸಿ ಹೇಳಿಕೆ ನೀಡುವ ಭರದಲ್ಲಿ ತುಮಕೂರು ಏನು ಬಾಂಬೆ ರೆಡ್‍ಲೈಟ್ ಏರಿಯಾನ? ಬೇಕು ಬೇಕಾದವರಿಗೆಲ್ಲಾ ಇಲ್ಲಿ ಬಂದು ರಾಜಕಾರಣ ಮಾಡುವುದಕ್ಕೆ ಎಂದು ಕಿಡಿಕಾರಿದರು. ಮತ್ತೊಂದೆಡೆ ಚಿಕ್ಕನಾಯಕನಹಳ್ಳಿ ಹಾಲಿ ಶಾಸಕ ಮಾಧುಸ್ವಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ವೈವಾಹಿಕ ಖಾಸಗಿ ಜೀವನದ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ದ್ವಿಪತ್ನಿತ್ವ ಅಪರಾಧವಲ್ಲವೇ? ಈ ತಪ್ಪು ಮಾಡಿದವರು ಹೇಗೆ ಸಿಎಂ ಖುರ್ಚಿ ಮೇಲೆ ಕೂತಿದ್ದರು? ಎಂದು ಪ್ರಶ್ನಿಸಿದ್ದಾರೆ. ತಮ್ಮ ಹೇಳಿಕೆ ಸಮರ್ಥಿಸಿ ಕೊಂಡು, ಚರ್ಚೆಗೆ ಬಂದರೆ ಪುರಾವೆಯನ್ನೂ ಒದಗಿಸುವ ಮಾತನಾಡಿದ್ದಾರೆ.

ಮತ್ತೊಂದೆಡೆ ಕೊಪ್ಪಳದಲ್ಲಿ ಬಿಜೆಪಿ ಹಿರಿಯ ಮುಖಂಡ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ, ಲೋಕಸಭಾ ಚುನಾವಣೆಯ ನಂತರ ಬಿಜೆಪಿ 22ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೆಗೆದು ಬಿದ್ದು ಹೋಗ್ತಾರೆ ಎಂದು ಪದೇ ಪದೆ ಹೇಳುವ ಮೂಲಕ ಟೀಕಾಕಾರರಿಗೆ ದೊಡ್ಡ ಆಹಾರವಾಗಿ ಪರಿಣಮಿಸಿದ್ದಾರೆ. ಇದು ಸಾಲದೆಂಬಂತೆ ಈಶ್ವರಪ್ಪ, ಮಾಜಿ ಪ್ರಧಾನಿ ದೇವೇಗೌಡರ ಕೌಟುಂಬಿಕ ರಾಜಕಾರಣವನ್ನೂ ಪ್ರಸ್ತಾಪಿಸಿದ್ದಾರೆ. ದೇವೇಗೌಡರಿಗೆ 28 ಮಕ್ಕಳಾದರೂ ಇದ್ದಿದ್ದರೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧೆಗಿಳಿಸುತ್ತಿದ್ದರು. ಅದೂ ಬೇಡ 14 ಜನ ಗಂಡು ಮಕ್ಕಳಿದ್ದರೆ ಅವರಿಗೆ ಮದುವೆ ಮಾಡಿ ಬರುವ 14 ಸೊಸೆಯಂದಿರು ಸೇರಿ 28 ಮಂದಿಯನ್ನು ಚುನಾವಣಾ ಕಣಕ್ಕಿಳಿಸುತ್ತಿದ್ದರು ಎಂದು ಲೇವಡಿ ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು.

ಇನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ತಾವು ಸ್ಪರ್ಧಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮತಪ್ರಚಾರದ ವೇಳೆ ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ `ಮೋದಿ ಮಹಾ ಸುಳ್ಳುಗಾರ. ಎಲ್ಲವನ್ನೂ ನಾನೇ ಮಾಡಿದ್ದು ಎಂದು ಹೇಳುತ್ತಾರೆ. ಅವರು ಬೀದಿಯಲ್ಲಿ ಮಗು ಹೋಗುತ್ತಿದ್ದರೆ ಅದು ಸಹ ನನ್ನದು’ ಎಂದು ಹೇಳುತ್ತಾರೆ ಎಂದು ಬುಧವಾರ ಪ್ರಚಾರ ಭಾಷಣದಲ್ಲಿ ಹೇಳಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಅತ್ಯಂತ ವಿಷಾಧದ ಸಂಗತಿ ಎಂದರೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಸೇರಿ ನನಗೆ ಮಾಟ ಮಾಡಿಸಿದ್ದಾರೆ. ಅದರಿಂದಾಗಿಯೇ ನಾನು ಕೆಲ ದಿನಗಳಿಂದ ಮಂಕಾಗಿದ್ದೇನೆಂದು ಹೇಳಿ ನಗೆಪಾಟಲಿಗೀಡಾಗಿದ್ದಾರೆ.

Translate »