ಇಲ್ಲಿ ಸಾಗಿದರೆ ಕೊಳಚೆ ನೀರಿನ ಮಹಾಮಜ್ಜನ!?
ಮೈಸೂರು

ಇಲ್ಲಿ ಸಾಗಿದರೆ ಕೊಳಚೆ ನೀರಿನ ಮಹಾಮಜ್ಜನ!?

December 13, 2019

ಮೈಸೂರು,ಡಿ.12(ವೈಡಿಎಸ್)-ಒಂದೆಡೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆ ಗುಂಡಿ ಬಿದ್ದಿದ್ದರೆ, ಮತ್ತೊಂದೆಡೆ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸವಾರರು ಎಚ್ಚರ ತಪ್ಪಿ ದರೆ ಕೊಳಚೆ ನೀರಿನ ಮಜ್ಜನ ಗ್ಯಾರಂಟಿ.

ಅಶೋಕಪುರಂನಿಂದ ರಾಮಕೃಷ್ಣಪರಮಹಂಸ ವೃತ್ತ ಸಂಪರ್ಕಿಸುವ ಉದಯರವಿ ಮುಖ್ಯರಸ್ತೆ ಅಶೋಕ ಪುರಂನಿಂದ ಜಯನಗರ ಇಸ್ಕಾನ್ ಟೆಂಪಲ್‍ವರೆಗೆ ರಸ್ತೆ ಗುಂಡಿಗಳಿಂದ ಕೂಡಿದೆ. ಜತೆಗೆ ಅಶೋಕಪುರಂನ ಪೌರಕಾರ್ಮಿಕರ ಕಾಲೋನಿಯ ಚರಂಡಿ ನೀರು ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ರಸ್ತೆ ಮೇಲೆಯೇ ಹರಿಯು ತ್ತಿರುವುದರಿಂದ ವಾಹನ ಸವಾರರು ಕೊಳಚೆ ನೀರಿನ ಮಧ್ಯೆ ಸಂಚರಿಸಬೇಕಿದೆ. ಒಂದು ವೇಳೆ ಎಚ್ಚರ ತಪ್ಪಿದರೆ ಕೊಳಚೆ ನೀರಿನ ಮಜ್ಜನ ಗ್ಯಾರಂಟಿ.

ಕೊಳಚೆ ನೀರಿಗೆ ತಡೆ: ಭಾರೀ ಗಾತ್ರದ ವಾಹನಗಳ ಸಂಚಾರವನ್ನು ತಡೆಯಲು ರೈಲ್ವೆ ಇಲಾಖೆ ವತಿಯಿಂದ ರೈಲ್ವೆ ಅಂಡರ್ ಬ್ರಿಡ್ಜ್‍ನ ಎರಡೂ ಬದಿಯೂ ಕಬ್ಬಿಣದ ಕಮಾನನ್ನು ನಿರ್ಮಿಸಲು ಗುಂಡಿಗಳನ್ನು ತೋಡಿದ್ದು, ಚರಂಡಿ ನೀರು ಗುಂಡಿಗೆ ಬಾರದಂತೆ ಸುತ್ತಲೂ ಕಟ್ಟೆ ನಿರ್ಮಿಸಿದ್ದಾರೆ. ಇದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ.

ಚರಂಡಿಯಾದ ರಸ್ತೆ: ಅಶೋಕಪುರಂನಿಂದ ರೈಲ್ವೆ ಅಂಡರ್‍ಬ್ರಿಡ್ಜ್‍ವರೆಗೆ ಇರುವ ಚರಂಡಿಯು ಸಂಪೂರ್ಣ ವಾಗಿ ಮಣ್ಣಿನಿಂದ ಮುಚ್ಚಿ ಹೋಗಿದೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಯ ಬದಿಯಲ್ಲೇ ಹರಿಯುವುದರಿಂದ ದುರ್ವಾಸನೆ ಬೀರುತ್ತಿದೆ.

ಸಂಚಾರಕ್ಕೆ ತೊಡಕು: ಪ್ರತಿನಿತ್ಯ ಸಾವಿರಾರು ವಾಹನ ಗಳು ಸಂಚರಿಸುವ ಈ ರಸ್ತೆ ಜಯನಗರ ಇಸ್ಕಾನ್ ಟೆಂಪಲ್‍ವರೆಗೆ ಗುಂಡಿಬಿದ್ದಿದ್ದು, ದೊಡ್ಡ ಹೊಂಡಗಳಂತೆ ಕಾಣಿಸುತ್ತವೆ. ಜತೆಗೆ ಜಲ್ಲಿಕಲ್ಲು ರಸ್ತೆಯೆಲ್ಲಾ ಹರಡಿ ಕೊಂಡಿವೆ. ಇದರಿಂದ ಹಲವರು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.

Translate »