ನಮಗೆ ಗುಡಿಸಲೇ ಚೆನ್ನಾಗಿತ್ತು, ಮನೆ ಕೊಟ್ಟರು ಈಗ ನೆಮ್ಮದಿ ಇಲ್ಲದಂತಾಗಿದೆ
ಮೈಸೂರು

ನಮಗೆ ಗುಡಿಸಲೇ ಚೆನ್ನಾಗಿತ್ತು, ಮನೆ ಕೊಟ್ಟರು ಈಗ ನೆಮ್ಮದಿ ಇಲ್ಲದಂತಾಗಿದೆ

January 5, 2019

ಮೈಸೂರು: ಗುಡಿಸಲಿನಲ್ಲಿದ್ದಾಗಲೇ ಚೆನ್ನಾಗಿತ್ತು. ಈಗ ಮೂಲಸೌಲಭ್ಯಗಳಿಲ್ಲದೇ ಪರಿತಪಿಸುವಂತಾಗಿದೆ… ಸರ್ಕಾರದಿಂದ ಮನೆ ಕಟ್ಟಿಸಿಕೊಡುತ್ತೇ ವೆಂದು ಮಧ್ಯವರ್ತಿಗಳು ಹಣ ಪಡೆದಿದ್ದಾರೆ… ನಮಗೆ ಹಂಚಿಕೆಯಾದ ಮನೆಯಲ್ಲಿ ಅನ್ಯರು ವಾಸವಿದ್ದಾರೆ… ಹೀಗೆ ಹತ್ತು ಹಲವು ಸಮಸ್ಯೆಗಳು ಮೈಸೂರಿನ ಕೊಳಗೇರಿ ನಿವಾಸಿಗಳಿಂದ ಕೇಳಿ ಬಂದಿತು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್ಸ್‍ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಕೊಳಗೇರಿ ನಿವಾಸಿಗಳ ಕುಂದು ಕೊರತೆಗಳಿಗೆ ಸಂಬಂ ಧಿಸಿದಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯ ಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅದಾಲತ್‍ನಲ್ಲಿ ಈ ರೀತಿ ಹಲವಾರು ಸಮಸ್ಯೆಗಳು ಅನಾವರಣಗೊಂಡವು.

ಧ್ವನಿ ಮಹಿಳಾ ಒಕ್ಕೂಟದ ಮಂಗಳಗೌರಿ ಮಾತನಾಡಿ, ರೂಪಾನಗರ, ಭರತ್‍ನಗರ, ಅಂಬೇಡ್ಕರ್ ನಗರ ಹಾಗೂ ನಿಂಗರಾಜನಕಟ್ಟೆಯಲ್ಲಿ ಸ್ಲಂ ನಿವಾಸಿ ಗಳಿಗಾಗಿ ಸರ್ಕಾರದ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ ಈ ಎಲ್ಲಾ ಕಡೆಗಳಲ್ಲೂ ಸ್ಲಂ ನಿವಾಸಿಗಳ ಮನೆಗಳ ಬಳಿಯಲ್ಲಿ ವಿವಿಧ ರೀತಿ ತ್ಯಾಜ್ಯ ತಂದು ಸುರಿಯುತ್ತಾರೆ. ಇದರಿಂದ ಅನೈರ್ಮಲ್ಯದ ವಾತಾವರಣ ಸೃಷ್ಟಿಯಾಗಿದೆ. ಇದನ್ನು ತಪ್ಪಿಸಿ ಸ್ವಚ್ಛತೆಗೆ ಅನುವು ಮಾಡಿಕೊಡದಿದ್ದರೆ, ನಿವಾಸಿಗಳು ಅನಾರೋಗ್ಯದ ಸಮಸ್ಯೆಗಳಿಗೆ ತುತ್ತಾಗಲಿದ್ದಾರೆ. ಇದಕ್ಕೆ ಪರಿಹಾರ ನೀಡ ಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಪ್ರದೇಶಗಳು ಬೋಗಾದಿ ಹಾಗೂ ಹಂಚ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರಲಿದ್ದು, ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಅಂಬೇಡ್ಕರ್ ಆವಾಸ್ ಯೋಜನೆಯಡಿ ಮನೆ ನಿರ್ಮಿಸುವ ಸಂಬಂಧ ಬಿಲ್ಲು ಪಾವತಿಯಾಗಿಲ್ಲ. ಇದು ನಮ್ಮೊಬ್ಬರ ಸಮಸ್ಯೆ ಮಾತ್ರವಲ್ಲ. ಹಲವು ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಾಣದ ವಿವಿಧ ಹಂತಗಳ ಬಿಲ್ಲುಗಳು ಪಾವತಿ ಮಾಡಿಲ್ಲ ಎಂದು ಮೇಟಗಳ್ಳಿಯ ಅಂಬೇಡ್ಕರ್ ಜ್ಞಾನ ಲೋಕದ ಶಾಂತಮ್ಮ ಅಳಲು ತೊಡಿ ಕೊಂಡರು. ಇವರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿ ಸಿದ ಜಿಲ್ಲಾಧಿಕಾರಿಗಳು, ಈ ಯೋಜನೆಯಡಿ ಮನೆ ನಿರ್ಮಿಸುವ ಸಂಬಂಧ ಜಿಪಿಎಸ್‍ನಲ್ಲಿ ನಮೂದಿಸುತ್ತಿದ್ದಂತೆ ತಂತಾನೆ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮಾ ಆಗಬೇಕು. ನಿಮ್ಮ ಸಮಸ್ಯೆಗೆ ಸಂಬಂಧಿಸಿದಂತೆ ಯಾವ ಹಂತದಲ್ಲಿ ಹಣ ಪಾವತಿಯಾಗುತ್ತಿಲ್ಲ ಎಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಸಲೇ ಚೆನ್ನಾಗಿತ್ತು: ನರ್ಮ್ ಯೋಜನೆಯಡಿ ಸ್ಲಂ ನಿವಾಸಿಗಳಿಗೆ ಹಲವಡೆ ಮನೆ ನಿರ್ಮಿಸಿಕೊಟ್ಟಿ ದ್ದಾರೆ. ಆದರೆ ಸಮರ್ಪಕ ಮೂಲಸೌಲಭ್ಯ ಕಲ್ಪಿಸಿಲ್ಲ. ಶಾಲೆ, ಅಂಗನವಾಡಿ, ಆಸ್ಪತ್ರೆ ಅಂತಹ ಪ್ರಮುಖ ಸೇವೆಗಳಿಗೆ ಸ್ಲಂ ನಿವಾಸಿಗಳು ದೂರದ ಪ್ರದೇಶಗಳಿಗೆ ಹೋಗಬೇಕು. ಪ್ರಮುಖವಾಗಿ ಸ್ವಚ್ಛತೆ ಎಂಬುದೇ ಮರೀಚಿಕೆಯಾಗಿದೆ. ಅಮೃತ್ ಬಡಾವಣೆಯಲ್ಲಿ ಮಾದಕ ವಸ್ತು ಗಳ ಸೇವಿಸುವ ಪುಂಡರಿದ್ದು, ಇವರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಮಸ್ಯೆ ಗಳನ್ನು ನೋಡಿದರೆ ಈ ಹಿಂದೆ ನಾವು ಗುಡಿಸಲಲ್ಲಿ ಇದ್ದಾಗಲೇ ಚೆನ್ನಾಗಿತ್ತು ಎನ್ನಿಸುತ್ತದೆ ಎಂದು ಧ್ವನಿ ಮಹಿಳಾ ಒಕ್ಕೂಟದ ಅಧ್ಯಕ್ಷೆಯೂ ಆದ ಕೇಸರೆ ಪಾರ್ಕ್ ನಿವಾಸಿ ನಳಿನಕುಮಾರಿ ಬೇಸರ ವ್ಯಕ್ತಪಡಿಸಿ ದರು. ಇವರಿಗೆ ದನಿಗೂಡಿಸಿದ ಮತ್ತೊಬ್ಬ ಮಹಿಳೆ, ನರ್ಮ್ ಯೋಜನೆಯಡಿ ನಿರ್ಮಿಸಿರುವ ಬಹುತೇಕ ಮನೆಗಳ ಗುಣಮಟ್ಟ ಕಳಪೆಯಾಗಿದೆ. ಕಾಮನಕೆರೆ ಹುಂಡಿಯಲ್ಲಿ ಚೇಂಬರ್ ಹೊಡೆದು ಮನೆಯೊಳಗೆ ಕೊಳಚೆ ನೀರು ಸೇರುತ್ತಿದೆ ಎಂದು ಆರೋಪಿಸಿದರು.

ಈ ಸಂಬಂಧ ಸ್ಲಂಗಳ ಸ್ಥಿತಿಗತಿ ಬಗ್ಗೆ ವಿವರಿಸಿದ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಅಭಿಯಂತರ ಬಿ.ಎಂ.ಕಪನಿಗೌಡ, 2008ರಲ್ಲಿ ನರ್ಮ್ ಯೋಜನೆ ಮೈಸೂರಿನಲ್ಲಿ ಅನುಷ್ಠಾನಗೊಂಡಿತು. ಈ ಯೋಜನೆಯಡಿ 33 ಪ್ರದೇಶಗಳಲ್ಲಿ ಈವರೆಗೆ ಒಟ್ಟು 6,328 ಮನೆಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ರಿಂಗ್ ರಸ್ತೆ ಹೊರಗಿನ 8 ಪ್ರದೇಶದಲ್ಲಿ ಪಾಲಿಕೆ ವ್ಯಾಪ್ತಿಗೆ ಸೇರದ ಹಿನ್ನೆಲೆಯಲ್ಲಿ ನಿರ್ವಹಣೆ ಸರ್ಮ ಪಕವಾಗಿಲ್ಲದೆ ಸಮಸ್ಯೆ ಎದುರಾಗಿದೆ. ಅದಾಗ್ಯೂ ಶೀಘ್ರ ಪರಿಹರಿಸಬೇಕಾದ ಗಂಭೀರ ಸಮಸ್ಯೆಗಳಿಗೆ ಪಾಲಿಕೆ ಸ್ಪಂದಿಸುತ್ತಿದೆ. ಇನ್ನು ಈ ಪ್ರದೇಶಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬಹು ಉಪ ಯೋಗಿ ಸಭಾಂಗಣ ನಿರ್ಮಿಸಿದ್ದು, ಅಂಗನವಾಡಿ, ಆರೋಗ್ಯ ಕೇಂದ್ರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಬಳಿಕ ಈ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಶೀಘ್ರ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಮನೆಗಳ ಗುಣಮಟ್ಟ ಕಳಪೆಯಾಗಿರುವ ಎಂಬ ದೂರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಕೈಗೊಳ್ಳಬೇಕಿದ್ದು, ಈ ಸಂಬಂಧ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ದುರಸ್ತಿ ಕಾಮಗಾರಿ ಆರಂಭಿಸಬೇಕಾಗುತ್ತದೆ. ಇದಕ್ಕಾಗಿ ಪರಿಶೀಲಿಸಿ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಕಪನಿಗೌಡರಿಗೆ ನಿರ್ದೇಶನ ನೀಡಿದರು.

ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಮುಡಾ ಆಯುಕ್ತ ಕಾಂತರಾಜು, ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇಗಳಾದ ತೇಜಶ್ರೀ, ಮಹದೇವ್, ಮಾಜಿ ಮೇಯರ್ ಹಾಗೂ ಪೌರಕಾರ್ಮಿಕರ ಮುಖಂಡ ನಾರಾಯಣ್, ಡಿಎಸ್‍ಎಸ್ ಮುಖಂಡರಾದ ನಿಂಗರಾಜು ಮಲ್ಲಾಡಿ, ಕೆ.ನಂಜಪ್ಪ ಮತ್ತಿತರರು ಹಾಜರಿದ್ದರು.

Translate »