ಮಡಿಕೇರಿ ನಿರಾಶ್ರಿತರ ಕೇಂದ್ರದಲ್ಲಿ ಮೊಳಗಿತು ಮಂಗಳವಾದ್ಯ
ಮೈಸೂರು

ಮಡಿಕೇರಿ ನಿರಾಶ್ರಿತರ ಕೇಂದ್ರದಲ್ಲಿ ಮೊಳಗಿತು ಮಂಗಳವಾದ್ಯ

August 27, 2018

ಮಡಿಕೇರಿ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜನರು ತತ್ತರಿಸಿದ್ದರು. ಮನೆ ಕಳೆದುಕೊಂಡು ಚಿಂತಾಕ್ರಾಂತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಹಲವು ಕುಟುಂಬಗಳು ಆಸ್ತಿ-ಪಾಸ್ತಿ ಕಳೆದುಕೊಂಡು ಚಿಂತೆಯಲ್ಲಿದ್ದ ಸಂತ್ರಸ್ತರಿಗೆ, ಭರವಸೆ ಕಲ್ಪಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ಮುಂದುವರೆದಿವೆ.

ಇದಕ್ಕೆ ಸಾಕ್ಷಿ ಎಂಬಂತೆ ಸಂತ್ರಸ್ತ ಕುಟುಂಬವೊಂದರ ಮನೆ ಮಗಳ ಮದುವೆ ಸಡಗರ, ಸಂಭ್ರಮದಿಂದ ನಿರಾಶ್ರಿತ ಕೇಂದ್ರದಲ್ಲಿ ನಡೆಯಿತು. ಮಕ್ಕಂದೂರು ಗ್ರಾಮದ ರಾಟೆ ಮನೆ ಪೈಸಾರಿ ನಿವಾಸಿ ಆರ್.ಮಂಜುಳಾ ಮತ್ತು ಕೇರಳದ ಕೂತುಪರಂಬು ನಿವಾಸಿ ರಜೀಶ್ ಅವರ ವಿವಾಹ ಈ ಹಿಂದೆ ನಿಶ್ಚಯವಾಗಿತ್ತು. ಆದರೆ ಇತ್ತೀಚೆಗೆ ಪ್ರಕೃತಿ ವಿಕೋಪ ಸಂಭವಿಸಿದಾಗ ಮಂಜುಳಾ ಅವರ ಮನೆ ಕೂಡ ತೀವ್ರ ಹಾನಿಗೊಳಗಾಗಿ ಇಡೀ ಕುಟುಂಬವೇ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿತ್ತು.

ಭೂ ಕುಸಿತದಿಂದ ಮನೆ, ಮದುವೆಗೆ ಕೂಡಿಟ್ಟ ಚಿನ್ನ, ಬಟ್ಟೆ ಎಲ್ಲವೂ ಭೂ ಸಮಾಧಿಯಾಗಿತ್ತು. ಎಲ್ಲವನ್ನು ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಬಡ ಕುಟುಂಬ ನಿರಾಶ್ರಿತರ ಶಿಬಿರ ಸೇರಿತ್ತು. ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡುವ ಕನಸು ಕಂಡಿದ್ದ ಅವರ ಅಣ್ಣ, ಅಣ್ಣು ಕುಸಿದು ಹೋಗಿದ್ದ. ದಾಂಪತ್ಯ ಬದುಕಿಗೆ ದಿನ ಎಣಿಸುತ್ತಿದ್ದ ಮದುಮಗಳು ಮಂಜುಳಾ
ನಿರಾಶ್ರಿತರ ಕೇಂದ್ರದಲ್ಲಿ ತನ್ನ ಬದುಕನ್ನು ನೆನೆದು ಕೊರಗುತ್ತಾ ದಿನ ದೂಡುತ್ತಿದ್ದಳು. ಈ ವಿಷಯ ತಿಳಿದ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಈಗಾಗಲೇ ನಿಶ್ಚಯವಾಗಿದ್ದ ಮದುವೆ ಮಾಡಲು ಮುಂದಾದವು. ಅದರಂತೆ ಶಾಸ್ತ್ರೋಕ್ತವಾಗಿ ಸಂಭ್ರಮ ಮತ್ತು ಸಡಗರದಿಂದ ಮದುವೆ ನಡೆದದ್ದು ವಿಶೇಷವಾಗಿತ್ತು. ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಅಚ್ಚುಕಟ್ಟಾಗಿ ಮದುವೆ ನೆರವೇರಿತು. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಸೇರಿದಂತೆ ಹಲವರು ಮದುವೆಗೆ ತೆರಳಿ ನವಜೋಡಿಗೆ ಶುಭ ಹಾರೈಸಿದರು.

ವಧು-ವರನ ಸಂಬಂಧಿಕರೊಂದಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪದಲ್ಲಿ ಊಟ ಮಾಡುವ ಮೂಲಕ ನಿರಾಶ್ರಿತರ ಕೇಂದ್ರದಲ್ಲಿ ನಡೆದ ಸರಳ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು. ಸಂತ್ರಸ್ಥರಿಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದರು. ಸೇವಾ ಭಾರತಿ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನೀಡಿದ ಆರ್ಥಿಕ ನೆರವು ಹಾಗೂ ಮಡಿಕೇರಿ ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಬಡಕುಟುಂಬದ ಹೆಣ್ಣುಮಗಳು ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು.

ಲಯನ್ಸ್ ಕ್ಲಬ್ ಮತ್ತು ಸೇವಾಭಾರತಿ ಸದಸ್ಯರಂತೂ ತಮ್ಮದೇ ಕುಟುಂಬದ ಮಗಳ ವಿವಾಹವೇನೋ ಎಂಬಂತೆ ಸಂಭ್ರಮದಿಂದ ವಿವಾಹ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ನೆರವು ನೀಡಿ ಸಹಕರಿಸಿದರು. ಲಯನ್ಸ್ ಕ್ಲಬ್‍ನ ಅಧ್ಯಕ್ಷ ಕೆ.ಕೆ.ದಾಮೋದರ್, ಖಜಾಂಚಿ ಬಿ.ಸಿ ನಂಜಪ್ಪ, ಕಾರ್ಯದರ್ಶಿ ಸೋಮಣ್ಣ, ಸದಸ್ಯರಾದ ಮದುಕರ್, ಉಳ್ಳಾಗಡ್ಡಿ, ಮೋಹನ್ ದಾಸ್, ಪ್ರೇಮ, ಸೇವಾ ಭಾರತಿಯ ಕೆ.ಕೆ.ಮಹೇಶ್, ರಾಕೇಶ್, ಸವಿತಾ ರಾಕೇಶ್, ರಾಜೇಶ್, ಅಜಯ್, ರಂಜಿತ್, ವಿ.ವಿ ಅರವಿಂದ್, ಬಿ.ವಿ ಹರೀಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಸೇವಾ ಭಾರತಿಯ ಸ್ವಯಂಸೇವಕರು, ವಧುವರರ ಕುಟುಂಬಸ್ಥರ ಸಮ್ಮುಖದಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಿತು. ನಿರಾಶ್ರಿತರ ಕೇಂದ್ರದಲ್ಲಿರುವವರು ಕೂಡಾ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ವರನಿಗೆ ಶುಭ ಹಾರೈಸಿದರು.

Translate »