ಕಾಡಾನೆಗಳ ದಾಳಿ, ಅಪಾರ ಬೆಳೆ ನಷ್ಟಅರಣ್ಯಕ್ಕಟ್ಟಲು ಅಧಿಕಾರಿಗಳ ಹರಸಾಹಸ
ಮೈಸೂರು

ಕಾಡಾನೆಗಳ ದಾಳಿ, ಅಪಾರ ಬೆಳೆ ನಷ್ಟಅರಣ್ಯಕ್ಕಟ್ಟಲು ಅಧಿಕಾರಿಗಳ ಹರಸಾಹಸ

May 4, 2019

ಜಯಪುರ: ಮೈಸೂರು ತಾಲೂಕಿನ ಜಯಪುರ ಹೋಬಳಿ ಸಮೀಪ ಕಾಡಾನೆಗಳು ಬೀಡು ಬಿಟ್ಟಿದ್ದು, ಸುತ್ತಮುತ್ತ ಗ್ರಾಮಗಳ ರೈತರ ಜಮೀನುಗಳಲ್ಲಿನ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗಟ್ಟಲು ಹರಸಹ ಪಡುತ್ತಿದ್ದಾರೆ.

ಹೋಬಳಿಯ ಚಿಕ್ಕನಹಳ್ಳಿ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ವಾರದಿಂದ ಎರಡು ಕಾಡಾನೆಗಳು ಅರಣ್ಯ ಪ್ರದೇಶದ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಅಪಾರ ಬೆಳೆಗಳನ್ನು ನಾಶ ಮಾಡಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಬೆಟ್ಟದಬೀಡು ಸಮೀಪದ ಕೋಣನ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ.

ಆನೆಗಳನ್ನು ಮರಳಿ ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೂ ಆನೆಗಳು ಮಾತ್ರ ಕಾಡಿಗೆ ಮರಳದೆ ಕೋಣನ ಬೆಟ್ಟದಲ್ಲೇ ಅಡಗಿದ್ದು, ಕಳೆದ ಎರಡು ದಿನಗಳಿಂದ ದಸರಾ ಸಾಕಾನೆಗಳಾದ ಅಭಿಮನ್ಯು, ಕೃಷ್ಣ ಆನೆಯನ್ನು ಕರೆತಂದು ಕಾರ್ಯಾಚರಣೆ ನಡೆಸುತ್ತಿದ್ದರೊ ಪ್ರಯೋಜನವಾಗಿಲ್ಲ.

ಮೂರು ದಿನಗಳ ಹಿಂದೆ ಮಾವಿನಹಳ್ಳಿಯ ಶಿವಣ್ಣೇಗೌಡ ಮತ್ತು ಭೀಮಗೌಡ ಅವರ ಜಮೀನಿನಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆತೋಟವನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಹಲಸಿನ ಮರ ಕೊಂಬೆಗಳನ್ನು ಮುರಿದು ಹಲಸಿನ ಕಾಯಿಗಳನ್ನು ತಿಂದುಹಾಕಿರುವುದಲ್ಲದೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹೀರೇಕಾಯಿ ಫಸಲನ್ನೂ ನಾಶಪಡಿಸಿದೆ. ಅಲ್ಲದೆ ಇಂದು ಬೆಟ್ಟದಬೀಡು ಸಮೀಪದ ರಾಜಮ್ಮನ ಗುಡಿ ಪ್ರದೇಶ ಬಳಿ ಆನೆಗಳು ಬೀಡುಬಿಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೆಟ್ಟದಬೀಡು, ಮಾವಿನಹಳ್ಳಿ, ಹಾರೋಹಳ್ಳಿ, ಕಲ್ಲಹಳ್ಳಿ, ಗುಮಚನಹಳ್ಳಿ ಸೇರಿದಂತೆ ಸೋಲಿಗರ ಕಾಲೋನಿ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಬೆಳೆಗಳನ್ನು ಕಾಡಾನೆಗಳು ನಾಶ ಮಾಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಮೊದಲೇ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರು ತಾವು ಬೆಳೆದ ಬೆಳೆ ಆನೆ ದಾಳಿಗೆ ತುತ್ತಾಗಿದ್ದು, ಅರಣ್ಯ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಹಜರು ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಮಾವಿನಹಳ್ಳಿ ರೈತರಾದ ಮಹೇಶ್, ತಿಮ್ಮೇಗೌಡ, ಭೀಮಗೌಡ ಸೇರಿದಂತೆ ಅಕ್ಕಪಕ್ಕ ಗ್ರಾಮದ ರೈತರು ಆಗ್ರಹಿಸಿದ್ದಾರೆ.

ಆನೆಗಳನ್ನು ಕಾಡಿಗಟ್ಟಲು ಸತತ ಪ್ರಯತ್ನ ನಡೆಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ಆನೆಗಳನ್ನು ಮರಳಿ ಕಾಡಿಗೆ ಸೇರಿಸುತ್ತವೆ. ಹೆಚ್ಚಿನ ಪೊಲೀಸ್ ಭದ್ರತೆಯೊಂದಿಗೆ ಕಾರ್ಯ ಮುಂದುವರೆಸಿದ್ದು, ಚಿಕ್ಕನಹಳ್ಳಿ ಅರಣ್ಯ ಪ್ರದೇಶದ ವ್ಯಾಪ್ತಿ ರೈತರಿಗೆ ಜಮೀನುಗಳ ಬಳಿ ಸುಳಿಯದಂತೆ ಎಚ್ಚರಿಕೆ ನೀಡಲಾಗಿದೆ.
-ಪ್ರಶಾಂತ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ.

Translate »