ಮತ್ತೇ ಡಿಸಿಎಂ ಸ್ಥಾನ ಕೇಳಲ್ಲ
ಮೈಸೂರು

ಮತ್ತೇ ಡಿಸಿಎಂ ಸ್ಥಾನ ಕೇಳಲ್ಲ

February 4, 2020

ಮೈಸೂರು, ಫೆ.3(ಎಸ್‍ಬಿಡಿ)- ಡಿಸಿಎಂ ಸ್ಥಾನ ಕೇಳಿ, ಯಾರಿಗೂ ಮುಜುಗರ ಉಂಟು ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಪುನರುಚ್ಛರಿಸಿದ್ದಾರೆ.

ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಸೋಮವಾರ ಆಗಮಿಸಿದ್ದ ಅವರು, ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಉಪಮುಖ್ಯಮಂತ್ರಿ ಸ್ಥಾನ ಕೇಳಿ ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ತರುವುದಿಲ್ಲ. ಈ ವಿಚಾರವಾಗಿ ನಾನು ಚರ್ಚೆ ಮಾಡುವುದಿಲ್ಲ. ನಾನು ರಾಷ್ಟ್ರೀಯ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಸಚಿವ ಸಂಪುಟ ವಿಸ್ತರಣೆ ಹಾಗೂ ಯಾರೆಲ್ಲಾ ಸಚಿವರಾಗುತ್ತಾರೆ ಎಂಬುದು ಈಗಾಗಲೇ ಗೊತ್ತಾಗಿದೆ. ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕೊರೋನಾ ಪತ್ತೆಯಾಗಿಲ್ಲ: ಕೊರೋನಾ ವೈರಸ್ ರಾಜ್ಯದಲ್ಲಿ ಪತ್ತೆಯಾಗಿಲ್ಲ. ಸೋಂಕು ಪೀಡಿತ ಪ್ರದೇಶದಿಂದ ಬಂದಿರುವ 44 ಜನರ ರಕ್ತ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 29 ಮಂದಿ ರಕ್ತದಲ್ಲಿ ಯಾವುದೇ ವೈರಸ್ ಕಂಡುಬಂದಿಲ್ಲ. ಉಳಿದ ಮಾದರಿ ಪರೀಕ್ಷೆಯೂ ನಡೆಯುತ್ತಿದೆ. ಆತಂಕಪಡುವ ಅಗತ್ಯವಿಲ್ಲ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ 10 ಹಾಸಿಗೆಯುಳ್ಳ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ವೈರಸ್ ಶಂಕಿತರ ರಕ್ತ ಪರೀಕ್ಷೆ ಹಾಗೂ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ವೈರಸ್ ಪತ್ತೆಯಾದರೂ ಹೊರದೇಶದಿಂದ ಸೂಕ್ತ ಔಷಧಿ ತರಿಸಿಕೊಳ್ಳಲು ಹಾಗೂ ಅಂತಹ ವರ ಚಿಕಿತ್ಸಾ ವೆಚ್ಚ ಭರಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು. ಶ್ರೀರಾಮುಲು ಪುತ್ರಿ ರಕ್ಷಿತಾ ಅವರ ವಿವಾಹ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾ.4 ಹಾಗೂ 5ರಂದು ನಡೆಯಲಿದೆ. ಈ ಹಿನ್ನೆಲೆ ಶ್ರೀರಾಮುಲು ಸೋಮವಾರ ಮೈಸೂರಿಗೆ ಭೇಟಿ ನೀಡಿ, ಆತ್ಮೀಯರನ್ನು ಪುತ್ರಿಯ ವಿವಾಹಕ್ಕೆ ಆಹ್ವಾನಿಸಿದರು.

 

Translate »